ಬೇಡ್ತಿ-ವರದಾ ನದಿ ಜೋಡಣೆ ಕುರಿತು ಜನವರಿ 26ರಂದು ವಿಶೇಷ ಸಭೆ

KannadaprabhaNewsNetwork |  
Published : Jan 17, 2026, 03:15 AM IST
ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು. | Kannada Prabha

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆಯು ಈ ಭಾಗದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉತ್ತಮ ಯೋಜನೆಯಾಗಿದೆ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸುವ ಬಗ್ಗೆ ಚರ್ಚಿಸಲು ಜ.26ರಂದು ಮಧ್ಯಾಹ್ನ 2 ಗಂಟೆಗೆ ಹಾವೇರಿಯ ಹುಕ್ಕೇರಿಮಠದಲ್ಲಿ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ತಿಳಿಸಿದರು.

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆಯು ಈ ಭಾಗದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಉತ್ತಮ ಯೋಜನೆಯಾಗಿದೆ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸುವ ಬಗ್ಗೆ ಚರ್ಚಿಸಲು ಜ.26ರಂದು ಮಧ್ಯಾಹ್ನ 2 ಗಂಟೆಗೆ ಹಾವೇರಿಯ ಹುಕ್ಕೇರಿಮಠದಲ್ಲಿ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಮಧ್ಯ ಭಾಗ ಹಾವೇರಿ ಜಿಲ್ಲೆ ಸೇರಿದಂತೆ ಗದಗ, ಕೊಪ್ಪಳ, ರಾಯಚೂರು ಭಾಗದಲ್ಲಿ ನೀರಾವರಿ ಸೌಲಭ್ಯವಾಗಬೇಕಿದೆ. ಪಶ್ಚಿಮ ಘಟ್ಟದಲ್ಲಿ ಸುಮಾರು 300 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರವನ್ನು ಸೇರುತ್ತದೆ. ಅದಕ್ಕಾಗಿಯೇ ರಾಷ್ಟ್ರೀಯ ದೃಷ್ಟಿಕೋನದ ಯೋಜನೆಯಲ್ಲಿ ನದಿ ಜೋಡಣೆಯ ಪ್ರಸ್ತಾವನೆ ರೂಪಿಸಲಾಯಿತು. ದಕ್ಷಿಣ ಭಾರತದ ಎರಡು ಯೋಜನೆಗಳಲ್ಲಿ ವರದಾ ಬೇಡ್ತಿ ಜೋಡಣೆಯೂ ಒಂದಾಗಿದೆ. 2008ರ ವೇಳೆ ಸಂಸತ್ತಿನಲ್ಲಿ ಈ ಬಗ್ಗೆ ನಾನು ಚರ್ಚಿಸಿದ್ದೆ. ಆದರೆ ಯಾವುದೇ ಸ್ಪಂದನೆ ಸಿಗದ ಕಾರಣ ಜಾರಿಯಾಗಲಿಲ್ಲ. ಇದುವರೆಗೆ ಜಿಲ್ಲೆಯವರೇ ನೀರಾವರಿ ಸಚಿವರು, ಮುಖ್ಯಮಂತ್ರಿಗಳು ಆಗಿದ್ದಾರೆ. ಆದರೂ ಈ ಯೋಜನೆ ಜಾರಿಯಾಗದಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.90ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.10ರಷ್ಟು ಅನುದಾನ ನೀಡುತ್ತಿದ್ದು, ಶಿರಸಿ ಭಾಗದ ರೈತರು, ಮಠಾಧೀಶರು ಜನಪ್ರತಿನಿಧಿಗಳು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಶಿರಸಿ ಭಾಗದ ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಒಂದೇ ಕಾರಣಕ್ಕೆ ವಿರೋಧ ಮಾಡುತ್ತ ರಾಜಕಾರಣ ಮಾಡುವುದು ಸರಿಯಲ್ಲ. ಈ ಯೋಜನೆ ಕಣ್ಣೊರೆಸುವ ಯೋಜನೆಯಾಗಬಾರದು. ಅಭಿವೃದ್ಧಿಗಾಗಿ ನಿಷ್ಪಕ್ಷಪಾತ ಸರ್ವೇ ಕಾರ್ಯ ನಡೆಸಿ, ಡಿಪಿಆರ್ ಸಿದ್ದಗೊಳಿಸಬೇಕಿದೆ. ಹಾವೇರಿ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ಜನರಿಗೆ ನೀರಿನ ಜತೆಗೆ ನೀರಾವರಿ ಸೌಲಭ್ಯ ಒದಗಿಸಬೇಕಿದೆ. ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಣೆ ಮಾಡಿಕೊಳ್ಳಬೇಕು. ಉದ್ದೇಶಿತ ಯೋಜನೆಯಲ್ಲಿ ಹಿರೇವಡ್ಡಟ್ಟಿಯಲ್ಲಿ ನೀರು ಸಂಗ್ರಹಣೆ ಮಾಡುವ ಬಗ್ಗೆ ಪ್ರಸ್ತಾವವಿದೆ. ಇದರಿಂದ ಜಿಲ್ಲೆಯ ರೈತರಿಗೆ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ವರದಾ ಅಚ್ಚುಕಟ್ಟು ಪ್ರದೇಶದ ಜನರಿಗೆ ನೀರುನೀಡಿ ಮುಂದುಕ್ಕೆ ಒಯ್ಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್ ಮುಲ್ಲಾ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ, ಸೋಮಶೇಖರ ಕೋತಂಬರಿ, ಶಿವಯೋಗಿ ಹೊಸಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪಕ್ಷಾತೀತವಾಗಿ ಸಭೆ ಆಯೋಜನೆ: ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆಗೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಹಲವಾರು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಒಂದು ತಾರ್ಕಿಕ ಹಂತಕ್ಕೆ ತಲುಪಿದೆ. ಈ ಯೋಜನೆ ಬಗ್ಗೆ ಚರ್ಚಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜ. 26ರಂದು ಮಧ್ಯಾಹ್ನ 2 ಗಂಟೆಗೆ ಹುಕ್ಕೇರಿಮಠದಲ್ಲಿ ವಿಶೇಷ ಸಭೆ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ಮಠಾಧೀಶರು, ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಹಾಲಿ ಮತ್ತು ಮಾಜಿ ಜಿಪಂ, ತಾಪಂ, ಗ್ರಾಪಂ., ಪಿಎಲ್‌ಡಿ ಬ್ಯಾಂಕ್, ವಕೀಲರು, ಕನ್ನಡಪರ ಸಂಘಟನೆ, ವಿವಿಧ ಪುರುಷ ಮತ್ತು ಮಹಿಳಾ ಸಂಘಟನೆಗಳು ಪಕ್ಷಾತೀತವಾಗಿ, ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ
ಕೇಂದ್ರ ಸರ್ಕಾರದಿಂದ ಅನುದಾನ ನೀಡಿಕೆಯಲ್ಲಿ ತಾರತಮ್ಯ-ಶಾಸಕ ಮಾನೆ