ಸುಂಟಿಕೊಪ್ಪ : ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ಹೇಳಿದರು.ಬುಧವಾರ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿತಗೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೂಡ ಸ್ಪಷ್ಟ ಪದಬಳಕೆಯನ್ನು ಮಾಡುತ್ತಿರುವುದು ಕನ್ನಡ ಉಳಿವಿಗೆ ಸಹಕಾರಿ ಎಂದು ಅವರು ಅಭಿಪ್ರಾಯಿಸಿದರು. ಇಂಗ್ಲಿಷ್ ಮಾಧ್ಯಮವನ್ನು ಭಾಷೆಯಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕೆ ಹೊರತು ಕನ್ನಡವನ್ನು ನಿರ್ಲಕ್ಷ್ಯ ಮಾಡುವಂತಾಗಬಾರದು ಎಂದು ಅವರು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಶಾಲಾ ವತಿಯಿಂದ ಅಯೋಜಿಸಲಾದ ಸನ್ಮಾನವನ್ನು ಸ್ವೀಕರಿಸಿ ಶಾಲೆಯ ಸಹ ಶಿಕ್ಷಕ ಹಾಗೂ ಸಾಹಿತಿ ಸತೀಶ್ ಕಾಜೂರು ಮಾತನಾಡಿ, ಕನ್ನಡ ರಾಜ್ಯೋತ್ಸವದ ಆಚರಣೆಯ ಹುಟ್ಟು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಬ್ರಿಟಿಷರು ತಮ್ಮನ್ನು ಒಡೆದು ಆಳುವ ನೀತಿಯ ಹಿನ್ನಲೆಯಲ್ಲಿ ವಿವಿಧ ಭಾಷೆಗಳನ್ನು ಆಡುವ ಜನರನ್ನು ಒಟ್ಟಿಗೆ ಪರಸ್ಪರ ಮಾತನಾಡದಂತೆ ಮಾಡಿದರು. ಈ ಹುನ್ನಾರಗಳ ವಿರುದ್ಧ ಸಿಡಿದ್ದೆದ ಜನ ಹೋರಾಟ ನಡೆಸಿದ ಪರಿಣಾಮ ಭಾರತದಲ್ಲಿ ಮೊದಲು ತೆಲುಗು ಮಾತನಾಡುವ ಜನ ಒಂದೆಡೆ ಸೇರಿ ಆಂಧ್ರಪ್ರದೇಶವನ್ನು ರಚಿಸಿಕೊಂಡರು. ಇದರಿಂದ ಸ್ಪೂರ್ತಿ ಪಡೆದ ಕನ್ನಡ ಜನರೆಲ್ಲಾ ಒಂದಾಗಿ ಮೈಸೂರು ರಾಜ್ಯವನ್ನು ರಚಿಸಿಕೊಂಡರು. ಮುಂದೆ ಮೈಸೂರು ರಾಜ್ಯ ಕರ್ನಾಟಕ ಎಂದು ಹೆಸರಾಯಿತು. ಕರ್ನಾಟಕ ಎಂದರೆ ಕಪ್ಪು ಮಣ್ಣಿನ ಪ್ರದೇಶ ಪಕೃತಿ ಸಿರಿಗಳನ್ನು ಹೊಂದಿರುವ ಚೆಲುವ ಕನ್ನಡ ಪ್ರದೇಶ ಎಂದು ಸತೀಶ್ ಕಾಜೂರು ವರ್ಣಿಸಿದರು. ಕನ್ನಡದಲ್ಲಿ ಮಾತನಾಡಿ ಕನ್ನಡದಲ್ಲಿ ಓದಿ ಬರೆದು ನಾವು ಕನ್ನಡ ಮತ್ತು ಕರ್ನಾಟಕಕ್ಕೆ ಗೌರವ ತೋರಿಸಬೇಕೆಂದು ಅವರು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪಪ್ರಾಂಶುಪಾಲೆ ಶಾಂತ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ, ಮಾತನಾಡಿದರು. ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಎಚ್.ಎಸ್. ರವಿ, ಗೌರವಧ್ಯಕ್ಷ ಹೆಚ್.ಯು.ರಫೀಕ್ ಖಾನ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಕನ್ನಡ ನುಡಿ, ನೆಲ, ಜಲದ ಬಗ್ಗೆ ರಚಿಸಲಾಗಿರುವ ಗೀತೆಗಳು ಹಾಗೂ ಕರ್ನಾಟಕದ ರಾಜ್ಯದ ಕವಿಮಹಾರಾಜರು ಕನ್ನಡವನ್ನು ಬೆಳೆಸಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಸಾಹಿತಿಗಳ ಪರಿಚಯವನ್ನು ಮಾಡಿಕೊಟ್ಟರು.