ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ೩೪ನೇ ವರ್ಷದ ಮಹಾ ಶಿವರಾತ್ರಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಶಿವಪಂಚಾಕ್ಷರಿ ಜಪ ಹವನ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೆ ಪುರೋಹಿತರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವಪತ್ರೆ, ಕುಂಸಲ ಹೂವು, ಮುತುಗದ ಹೂವು, ಪಾರಿಜಾತ ಹೂವು, ಎಕ್ಕದ ಹೂವು, ಗಂಟೆ ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಶಿವರಾತ್ರಿಯ ಅಂಗವಾಗಿ ಪ್ರತಿ ವರ್ಷದಂತೆ ಶ್ರೀ ರಂಗನಾಥ ದೇವಾಲಯದಲ್ಲಿ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಹಬ್ಬದ ಕಾರಣದಿಂದ ಶಿವದೇವಾಲಯಗಳಿಗೆ ಭಕ್ತರು ದಂಡೆ ಹರಿದು ಬಂದಿತ್ತು. ನದಿ ದಂಡೆಯ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಕರಡಿಗೇರಿ ಶ್ರೀ ರಾಮೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಆನವಟ್ಟಿ ಸಮೀಪದ ಕೋಟಿಪುರದ ಕದಂಬರ ಕಾಲದ ಶ್ರೀ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.