ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಗರದ ಹಲವು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮುಂಜಾನೆ ಪ್ರಸಾದ ವಿನಿಯೋಗ ನಡೆಯಿತು. ನಗರದ ಪ್ರಮುಖ ದೇವಾಲಯಗಳಲ್ಲೊಂದಾಗಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ದೇವಾಲಯ ಟ್ರಸ್ಟ್ ವತಿಯಿಂದ ವಿಶೇಷ ಪೂಜೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿಯಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಭಕ್ತಗಣ ಭಕ್ತಿಯ ಸಿಂಚನದಲ್ಲಿ ಮಿಂದೆದ್ದರು.
ಸಾಂಪ್ರದಾಯಿಕ ಭೋಜನಕ್ಕೆ ವ್ಯವಸ್ಥೆ:ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿರುವ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತಲ್ಲದೆ, ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅವರೇಕಾಳು ಹಿಟ್ಟು ಪ್ರಸಾದವನ್ನು ಭಕ್ತಾದಿಗಳಿಗೆ ಬಡಿಸುವ ಮೂಲಕ ಚೈತನ್ಯ ವಾಯುವಿಹಾರಿಗಳ ಬಳಗ ಸಾಂಪ್ರದಾಯಿಕ ಭೋಜನಕ್ಕೆ ಉತ್ತೇಜನ ನೀಡಿದ್ದು ವಿಶೇಷವಾಗಿತ್ತು.
ತಾಲೂಕಿನ ಹೊಳಲು ಗ್ರಾಮದಲ್ಲಿರುವ ಶ್ರೀ ತಾಂಡವೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾತ್ರಿ ಪೂರ್ತಾ ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಂಗಲ ಗ್ರಾಮದ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಮಂದಿ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.