ಕನ್ನಡಪ್ರಭ ವಾರ್ತೆ ರಾಮನಗರ
ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವನ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ- ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.
ರಾಮನಗರದ ಐಜೂರಿನ ಮಲ್ಲೇಶ್ವರ ದೇವಸ್ಥಾನ, ವಿಜಯನಗರದಲ್ಲಿನ ಶ್ರೀ ಮುನೇಶ್ವರ ಸ್ವಾಮಿ ದೇವಾಲಯ, ಶಿವನಹಳ್ಳಿ ವೀರಭದ್ರಸ್ವಾಮಿ, ಧಾರಾಪುರ ಬಳಿಯಿರುವ ಅರ್ಧನಾರೀಶ್ವರ ದೇವಾಲಯ, ಬಿಡದಿ ಪಟ್ಟಣದ ಬಸವೇಶ್ವರ ದೇವಾಲಯ, ಶಿವಲಿಂಗಸ್ವಾಮಿ ದೇವಾಲಯ, ಕೇತಗಾನಹಳ್ಳಿಯ ಕಗ್ಗಲ್ ಬೀರೇಶ್ವರಸ್ವಾಮಿ ದೇಗುಲ, ನಿಂಗೇಗೌಡನದೊಡ್ಡಿಯ ಪುರಾತನ ಶಿವನ ದೇವಾಲಯ, ಬಿಲ್ಲಕೆಂಪನಹಳ್ಳಿ ಮಹದೇಶ್ವರ ದೇವಾಲಯ, ಬಾನಂದೂರಿನ ಬಸವೇಶ್ವರ ಮತ್ತು ಮಹದೇಶ್ವರ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆಗಳು ದಿನಪೂರ್ತಿ ನೆರವೇರಿದವು.ಗ್ರಾಮೀಣ ಪ್ರದೇಶಗಳಲ್ಲಿಯೂ ಈಶ್ವರ, ಶನೇಶ್ವರನ ದೇಗುಲಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹೋಮ, ಅಭಿಷೇಕ ನಡೆದವು. ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಿವನ ದೇಗುಲಗಳಲ್ಲಿ ಗಂಗಾಜಲವನ್ನು ಭಕ್ತರಿಗೆ ವಿತರಿಸಲಾಯಿತು.
ಯಶಸ್ವಿಯಾಗಿ ನಡೆದ ಎಳವಾರ ಕಾರ್ಯ
ಕೊಂಡಕ್ಕೆ ಎಳವಾರ ಹೊತ್ತು ಬಂದ ಜೋಡೆತ್ತುಗಳ ಆಕರ್ಷಣೆ ನೋಡುಗರ ಮೈ ಜುಮ್ಮೆನ್ನಿಸುವಂತಿತ್ತು. ವಿಶೇಷವಾಗಿ ಅಲಂಕರಿಸಲಾಗಿದ್ದ ಎತ್ತುಗಳ ಹೆಜ್ಜೆಯ ಗತ್ತು, ಮೈಕಟ್ಟು ನೋಡುಗರ ಗಮನ ಸೆಳೆದವು. ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಎಳವಾರ ಸಂದರ್ಭಕ್ಕೆ ಸಾಕ್ಷಿ ಯಾದರು.