ಧಾರವಾಡ ಭಾರತೀಯ ಸಂಗೀತ ವಿದ್ಯಾಲಯದಿಂದ ಮೊದಲ ಬಾರಿಗೆ ಕೊಡಮಾಡುವ 2026ನೇ ಸಾಲಿನ ''''ಸ್ವರಗಂಧರ್ವ'''' ಪ್ರಶಸ್ತಿಗೆ ಧಾರವಾಡದ ಹಿಂದೂಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಧಾರವಾಡ:

ಸ್ಥಳೀಯ ಭಾರತೀಯ ಸಂಗೀತ ವಿದ್ಯಾಲಯದಿಂದ ಮೊದಲ ಬಾರಿಗೆ ಕೊಡಮಾಡುವ 2026ನೇ ಸಾಲಿನ ''''''''ಸ್ವರಗಂಧರ್ವ'''''''' ಪ್ರಶಸ್ತಿಗೆ ಧಾರವಾಡದ ಹಿಂದೂಸ್ತಾನಿ ಗಾಯಕ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ಡಾ.ಸೌಭಾಗ್ಯ ಕುಲಕರ್ಣಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದರ ಕುಟುಂಬದಲ್ಲಿ ಜನಿಸಿದ ಶ್ರೀಪಾದ ಹೆಗಡೆ, ಬಾಲ್ಯದಲ್ಲಿ ಸಂಗೀತಾಸಕ್ತಿ ಹೊಂದಿದ್ದರು. 1982ರಲ್ಲಿ ಧಾರವಾಡಕ್ಕೆ ಸ್ಥಳಾಂತಗೊಂಡ ಶ್ರೀಪಾದ ಹೆಗಡೆ, ಹಾಸಣಗಿಯ ಗಣಪತಿ ಭಟ್ ಅವರಲ್ಲಿ ಪ್ರಾಥಮಿಕ ಹಂತ, ಪಂ. ಬಸವರಾಜ ರಾಜಗುರು ಅವರಲ್ಲಿ ಆಳವಾದ ಸಂಗೀತ ಅಧ್ಯಯನಗೈದು, ಪ್ರಬುದ್ಧ ಗಾಯಕರಾಗಿ ಹೊರಹೊಮ್ಮಿದ್ದಾಗಿ ಹೇಳಿದರು.

ಆಕಾಶವಾಣಿ ಕಲಾವಿದರಾಗಿ ಕಾರ್ಯನಿರ್ವಹಿಸಿದ ಪಂ. ಶ್ರೀಪಾದ ಹೆಗಡೆ ಅವರಿಗೆ ಆರ್ಯಭಟ, ಚಂದ್ರಹಾಸ, ಗಾನಗೋವಿಂದ, ಗಾನಗಂಧರ್ವ ಪ್ರಶಸ್ತಿಗಳು ಲಭಿಸಿದ್ದು, ಅವರ ಸಾಧನೆ ಗುರುತಿಸಿ ಸ್ವರಗಂಧರ್ವ ಪ್ರಶಸ್ತಿಗೂ ಆಯ್ಕೆ ಮಾಡಿದ್ದಾಗಿ ತಿಳಿಸಿದರು.

ಸಂಗೀತ ವಿದ್ಯಾಲಯದ ಉಪಾಧ್ಯಕ್ಷ ಶಫಿಕ್ ಖಾನ್ ಮಾತನಾಡಿ, ನ. 11ರ ಸಂಜೆ 5.30ಕ್ಕೆ ಸೃಜನಾ ಮಂದಿರದಲ್ಲಿ ನಡೆಯುವ ಪಂ. ಭೀಮಸೇನೆ ಜೋಶಿ ಸ್ಮರಣೆಯ ಸಮಾರಂಭದಲ್ಲಿ ₹ 1ಲಕ್ಷ ನಗದು, ಸ್ಮರಣಿಕೆ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದರು.

ಅಂದು ಬೆಳಗ್ಗೆ 10ಕ್ಕೆ ನವದೆಹಲಿ ಗಾಯಕಿ ಶಾಸ್ವತಿ ಮಂಡಲ ಗಾಯನದ ಜತೆಗೆ ರಫೀಯುದ್ಧೀನ್ ಸಾಬ್ರಿ ಅವರಿಂದ ತಬಲಾ ಸೋಲೋ ಜರುಗಲಿದೆ. ಸಂಜೆ 5.30ಕ್ಕೆ ಪ್ರಶಸ್ತಿ ಪುರಸ್ಕೃತ ಪಂ. ಶ್ರೀಪಾದ ಹೆಗಡೆ ಅವರಿಂದ ಗಾಯನ ಪ್ರಸ್ತುತಪಡಿಸುವುದಾಗಿ ಹೇಳಿದರು.

ಕಲಾವಿದ ರವೀಂದ್ರ ಯಾವಗಲ್ಲ ತಬಲಾ, ಸತೀತ ಭಟ್ ಹೆಗ್ಗಾರ ಮತ್ತು ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡುವರು ಎಂದು ಶಫಿಕ್ ಖಾನ್ ತಿಳಿಸಿದರು.