ಸಾಮಾಜಿಕವಾಗಿ ಬೆರೆಯುವುದು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ. ವ್ಯಾಯಾಮವು ಜ್ಞಾಪಕಶಕ್ತಿ ಮತ್ತು ಅರಿವನ್ನು ಸುಧಾರಿಸುತ್ತದೆ.
ಗದಗ: ಮೆದುಳಿನ ಅಸ್ವಸ್ಥತೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ತುಂಬಾ ಅವಶ್ಯಕವಾಗಿದ್ದು, ಯಾವುದೇ ನರ ಸಂಬಂಧಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಜಿಲ್ಲಾ ಆಸ್ಪತ್ರೆಯಲ್ಲಿರುವ ಮೆದುಳು ಉಪಕ್ರಮ ಚಿಕಿತ್ಸಾ ಕೇಂದ್ರದ ವೈದ್ಯರನ್ನು ನರರೋಗ ತಜ್ಞರನ್ನು ಸಂಪರ್ಕಿಸಬೇಕೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರಿಗಾಗಿ ಎರಡು ದಿನಗಳ ಕಾಲ ಜರುಗಿದ ಕರ್ನಾಟಕ ಮೆದುಳು ಉಪಕ್ರಮ ಕುರಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕವಾಗಿ ಬೆರೆಯುವುದು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮೆದುಳಿನ ಆರೋಗ್ಯ ವೃದ್ಧಿಸುತ್ತದೆ. ವ್ಯಾಯಾಮವು ಜ್ಞಾಪಕಶಕ್ತಿ ಮತ್ತು ಅರಿವನ್ನು ಸುಧಾರಿಸುತ್ತದೆ. ದೈಹಿಕ ಚಟುವಟಿಕೆಗಳು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತವೆ. ಅರಿವನ್ನು ಚುರುಕುಗೊಳಿಸುವುದರಿಂದ ಮೆದುಳಿನ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು ಎಂದರು. ಕರ್ನಾಟಕ ಮೆದುಳು ಉಪಕ್ರಮ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ರೋಣದ ಮಾತನಾಡಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಆಶಾ ಕಾರ್ಯಕರ್ತೆಯರು ತಮ್ಮ ದಿನನಿತ್ಯದ ಆರೋಗ್ಯ ಸೇವೆಯಲ್ಲಿ ಉಪಯೋಗಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸಂಪನ್ಮೂಲ ವ್ಯಕ್ತಿ ಡಾ. ಅಶ್ವಿನಿ ಎಂ. ಕುರಿಯವರ ಹಾಗೂ ರವಿ ನಂದಿಹಾಳ ಅವರು ಎರಡು ದಿನ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕುರಿತು ತರಬೇತಿ ನೀಡಿದ್ದಕ್ಕಾಗಿ ಅಭಿನಂದಿಸಲಾಯಿತು. ಆಶಾ ಕಾರ್ಯಕರ್ತೆ ಗೀತಾ ಹನಕನಹಳ್ಳಿ ಪ್ರಾರ್ಥಿಸಿದರು. ಬೂದೇಶ ಸಿದ್ದನಗೌಡ ಸ್ವಾಗತಿಸಿದರು. ಸುನೀಲ ಬದ್ದಿ ಪರಿಚಯಿಸಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ವೈ. ಹಕ್ಕಿ ವಂದಿಸಿದರು.