ಚಳ್ಳಕೆರೆ ಸೇರಿದಂತೆ ಅತ್ಯಂತ ಹಿಂದುಳಿದಿರುವ ಜಗಳೂರು, ಮೊಳಕಾಲ್ಮೂರು ಹಾಗೂ ಕೂಡ್ಲಿಗಿ ತಾಲೂಕುಗಳಿಗೆ ‘೩೭೧-ಜೆ’ ಮಾದರಿಯ ವಿಶೇಷ ಸ್ಥಾನಮಾನ ನೀಡಲು ಅರ್ಹತೆಯಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಪ್ರತಿಪಾದಿಸಿದ್ದಾರೆ.
- ಚಳ್ಳಕೆರೆ, ಜಗಳೂರು, ಮೊಳಕಾಲ್ಮೂರು, ಕೂಡ್ಲಿಗಿ ತಾಲೂಕಿನವರು ಒಟ್ಟಾಗಿ ಸಾಗಿದರೆ ಯಶಸ್ಸು ಸಾಧ್ಯ
- ಬಿಳಿಚೋಡು, ಬಗ್ಗೇನಹಳ್ಳಿ ಗ್ರಾಮಗಳಲ್ಲಿ ₹೩೧.೮೨ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ
- - -
ಕನ್ನಡಪ್ರಭ ವಾರ್ತೆ ಜಗಳೂರು
ಚಳ್ಳಕೆರೆ ಸೇರಿದಂತೆ ಅತ್ಯಂತ ಹಿಂದುಳಿದಿರುವ ಜಗಳೂರು, ಮೊಳಕಾಲ್ಮೂರು ಹಾಗೂ ಕೂಡ್ಲಿಗಿ ತಾಲೂಕುಗಳಿಗೆ ‘೩೭೧-ಜೆ’ ಮಾದರಿಯ ವಿಶೇಷ ಸ್ಥಾನಮಾನ ನೀಡಲು ಅರ್ಹತೆಯಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಪ್ರತಿಪಾದಿಸಿದರು.
ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ₹೧೦ ಕೋಟಿ ವೆಚ್ಚದ ಸೇತುವೆ ನಿರ್ಮಾಣ ಹಾಗೂ ಬಗ್ಗೇನಹಳ್ಳಿ ಗ್ರಾಮದಲ್ಲಿ ₹೧೫.೭೫ ಕೋಟಿ ವೆಚ್ಚದ ಹೊಸ ಕೈಗಾರಿಕಾ ಎಸ್ಟೇಟ್ ಸ್ಥಾಪನೆ ಸೇರಿದಂತೆ ಒಟ್ಟು ₹೩೧.೮೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ವಿಶೇಷ ಸ್ಥಾನಮಾನದ ಪ್ರತಿಪಾದನೆ:
ಈ ನಾಲ್ಕು ತಾಲೂಕುಗಳಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಭೂಮಿರಹಿತ ಶ್ರಮಿಕ ವರ್ಗದ ಜನರೇ ಹೆಚ್ಚಿದ್ದಾರೆ. ಭೌಗೋಳಿಕವಾಗಿ ಒಂದೇ ರೀತಿಯ ಹವಾಗುಣ ಹೊಂದಿರುವ ಈ ಪ್ರದೇಶಗಳ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ೩೭೧-ಜೆ ವಿಶೇಷ ಸ್ಥಾನಮಾನ ನೀಡುವುದು ಅಗತ್ಯ. ಈ ಹಿಂದೆ ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದೆ. ಮುಂಬರುವ ದಿನಗಳಲ್ಲಿ ಸಮಗ್ರ ಚರ್ಚೆ ಹಾಗೂ ಸಭೆಗಳ ಮೂಲಕ ಈ ಹೋರಾಟ ಮುನ್ನಡೆಸಬೇಕಿದೆ ಎಂದು ಸಚಿವರು ಹೇಳಿದರು.
ನ.೧೨ಕ್ಕೆ ₹೪೬ ಸಾವಿರ ಕೋಟಿ ವೆಚ್ಚದ ಯೋಜನೆ ಸಭೆ:
ಎಸ್ಟಿ ಕಲ್ಯಾಣ ಇಲಾಖೆಯಿಂದ ₹೧೨,೫೦೦ ಕೋಟಿ ರೂ. ಅನುದಾನವನ್ನು ಅಭಿವೃದ್ಧಿಗೆ ಬಳಸಲಾಗುತ್ತಿದೆ. ೩೬ ಇಲಾಖೆಗಳಿಗೆ ಹಂಚಿಕೆಯಾಗುವ ₹೧೦ ಸಾವಿರ ಕೋಟಿ ಅನುದಾನ ಕೆಲವು ವರ್ಗಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವ ದೂರಿಗೆ ಸ್ಪಂದಿಸಿ, ನ.೧೨ರಂದು ಪ್ರಮುಖ ನಾಯಕರ ಜೊತೆ ಮಹತ್ವದ ಸಭೆ ನಡೆಸಲಾಗುವುದು. ₹೪೬ ಸಾವಿರ ಕೋಟಿ ಅನುದಾನವನ್ನು ಅರ್ಹರಿಗೆ ಯಶಸ್ವಿಯಾಗಿ ತಲುಪಿಸುವ ಯೋಜನೆ ರೂಪಿಸಿ ರಾಜ್ಯ ಪರಿಷತ್ನಲ್ಲಿ ಮಂಡಿಸಲಾಗುವುದು ಎಂದರು.
ಸಾಮರಸ್ಯದ ಊರು ಕಡಬನಕಟ್ಟೆ:
ನನ್ನ ತವರು ಗ್ರಾಮ ಕಡಬನಕಟ್ಟೆಯಲ್ಲಿ ೨೪ ವರ್ಷಗಳಿಂದ ಪಂಚಾಯಿತಿ ಚುನಾವಣೆಯೇ ನಡೆದಿಲ್ಲ. ಎಲ್ಲ ಜನಾಂಗದವರೂ ಸಾಮರಸ್ಯದಿಂದ ಬಾಳುತ್ತಿದ್ದು, ನನ್ನ ತಂದೆ ತಿಪ್ಪಯ್ಯ ಹಾಕಿಕೊಟ್ಟ ಈ ಹಾದಿಯೇ ನಾನು ರಾಜಕೀಯವಾಗಿ ಸಚಿವನಾಗಲು ಪ್ರೇರಣೆಯಾಗಿದೆ ಎಂದು ತಿಳಿಸಿದರು.
₹೩೧.೮೨ ಕೋಟಿ ವೆಚ್ಚದ ಕಾಮಗಾರಿ:
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಬಿಳಿಚೋಡು ಸೇತುವೆ ₹೧೦ ಕೋಟಿ ಹಾಗೂ ಬಗ್ಗೇನಹಳ್ಳಿ ಕೈಗಾರಿಕಾ ಎಸ್ಟೇಟ್ ₹೧೫.೭೫ ಕೋಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿದರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಮಾಜಿ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಟೇಲ್, ಓಮಣ್ಣ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್, ಅಂಜಿನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- - -
-09ಜೆಜಿಎಲ್.1:
ಜಗಳೂರು ಬಿಳಿಚೋಡು ಗ್ರಾಮದಲ್ಲಿ ₹೧೦ ಕೋಟಿ ವೆಚ್ಚದ ಸೇತುವೆ ನಿರ್ಮಾಣ ಹಾಗೂ ಬಗ್ಗೇನಹಳ್ಳಿ ಗ್ರಾಮದಲ್ಲಿ ₹೧೫.೭೫ ಕೋಟಿ ವೆಚ್ಚದ ಹೊಸ ಕೈಗಾರಿಕಾ ಎಸ್ಟೇಟ್ ಸ್ಥಾಪನೆ ಸೇರಿದಂತೆ ಒಟ್ಟು ₹೩೧.೮೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ.ರಘುಮೂರ್ತಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.