ಅರಣ್ಯ, ಕಂದಾಯ ಭೂಮಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸರ್ವೆ ತಂಡ: ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Jul 07, 2024, 01:16 AM IST
ಕಡಬದಲ್ಲಿ ಅಹವಾಲು ಸ್ವೀಕಾರ  | Kannada Prabha

ಸಾರಾಂಶ

ಸರ್ಕಾರಿ ಸೇವೆಯಲ್ಲಿ ಮಾನವೀಯತೆ ಇದ್ದಾಗ ಜನರ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಜನರ ಹಿತ ಕಾಯುವುದು ಸರ್ಕಾರದ ಧ್ಯೇಯವಾಗಿದೆ. ಈ ನಿಟ್ಟನಲ್ಲಿ ಚುನಾವಣಾ ಪೂರ್ವದಲ್ಲಿ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯನ್ನು ಚಾಚು ತಪ್ಪದೆ ಅನುಷ್ಠಾನ ಮಾಡಿದೆ ಎಂದು ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಹಳಷ್ಟು ವರ್ಷಗಳಿಂದ ಜಟಿಲವಾಗಿ ಉಳಿದಿರುವ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ನಡುವಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಸರ್ವೆ ತಂಡವನ್ನು ರಚಿಸಿ ಸಮರೋಪಾದಿಯಲ್ಲಿ ಪರಿಹಾರ ನೀಡಲಾಗುವುದು. ಜನತಾದರ್ಶನದ ಮೂಲಕ ಸಲ್ಲಿಕೆಯಾದ ಅಹವಾಲು ಫಲಪ್ರದವಾಗಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಕಡಬದ ಸೈಂಟ್ ಜೋಕಿಮ್ಸ್‌ ಸಭಾಂಗಣದಲ್ಲಿ ಶನಿವಾರ ನಡದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಇರುವುದ ಸಾರ್ವಜನಿಕ ಸೇವೆಗಾಗಿ ಎಂಬ ಮನೋಭಾವ ಬೆಳೆಸಿಕೊಂಡು ಜನಸಾಮಾನ್ಯರೊಡನೆ ಗೌರವವಾಗಿ ನಡೆದುಕೊಳ್ಳಬೇಕು. ಸರ್ಕಾರಿ ಸೇವೆಯಲ್ಲಿ ಮಾನವೀಯತೆ ಇದ್ದಾಗ ಜನರ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತದೆ. ಜನರ ಹಿತ ಕಾಯುವುದು ಸರ್ಕಾರದ ಧ್ಯೇಯವಾಗಿದೆ. ಈ ನಿಟ್ಟನಲ್ಲಿ ಚುನಾವಣಾ ಪೂರ್ವದಲ್ಲಿ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯನ್ನು ಚಾಚು ತಪ್ಪದೆ ಅನುಷ್ಠಾನ ಮಾಡಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ, ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿ ವಿಜಯ ಪ್ರಸಾದ್ , ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಜಿ., ಜಿಲ್ಲಾ ಅರಣ್ಯ ಉಪಸಂರಕ್ಷಾಣಾಧಿಕಾರಿ ಆಂಟನಿ ಮರಿಯಪ್ಪ, ಮಂಗಳೂರು ಕಾರ್ಪೋರೇಟರ್‌ ವಿನಯರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸುಧೀರ್‌ ಶೆಟ್ಟಿ, ಪುತ್ತೂರು ವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಅಧಿಕಾರಿಗಳಾದ ಶ್ರವಣ್, ಅಕ್ಷಯ್ , ಜಿಲ್ಲಾ ಅರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಕಡಬ ತಹಸೀಲ್ದಾರ್‌ ಪ್ರಭಾಕರ ಖಜೂರೆ, ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆಂಪೇಗೌಡ ಮೊದಲಾದವರು ಇದ್ದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

ಅಹವಾಲು ಸ್ವೀಕಾರಕ್ಕೆ 12 ಕೌಂಟರ್‌

ಸಬಾಂಗಣದ ಹೊರಗಡೆ ವಿವಿಧ ಇಲಾಖೆಗಳ ೧೨ ಕೌಂಟರ್ ತೆರಯಲಾಗಿತ್ತು. ಆಯಾ ಇಲಾಖೆಗಳ ಕೌಂಟರ್‌ನಲ್ಲಿ ದೂರು ಸ್ವೀಕರಿಸಿ ಟೋಕನ್ ನಂಬರ್‌ ನೀಡಲಾಗುತ್ತಿತ್ತು. ಬಳಿಕ ಸಭಾಂಗಣದಲ್ಲಿ ಟೋಕನ್ ಸಂಖ್ಯೆಯ ಪ್ರಕಾರವಾಗಿ ಸಚಿವರ ಎದುರು ಕೂತು ಅಹವಾಲು ಬಗ್ಗೆ ವಿವರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳನ್ನು ಬಳಿಗೆ ಕರೆದು ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸುತ್ತಿದ್ದರು. ನಿಗದಿತ ಸಮಯಕ್ಕಿಂತ ೧.೩೦ ತಾಸು ತಡವಾಗಿ ಸಚಿವರು ಆಗಮಿಸಿದ್ದರು. ತಡವಾಗಿದ್ದಕ್ಕೆ ಸಚಿವರು ತಮ್ಮ ಭಾಷಣದಲ್ಲಿ ಕ್ಷಮೆಯಾಚಿಸಿದರು. ಅಂಗವಿಕಲರ ಅಹವಾಲನ್ನು ಸಚಿವರೇ ವೇದಿಕೆಯಿಂದ ಕೆಳಗಿಳಿದು ಬಂದು ಸ್ವೀಕರಿಸಿ ಪರಿಹಾರ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ