ಆಷಾಢ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ವಿಶೇಷ ಟಿಕೆಟ್‌..!

KannadaprabhaNewsNetwork |  
Published : Jun 12, 2025, 04:33 AM ISTUpdated : Jun 12, 2025, 11:14 AM IST
4 | Kannada Prabha

ಸಾರಾಂಶ

ಜೂ.27, ಜು.4, 11 ಮತ್ತು 18ರಂದು ಆಷಾಢ ಶುಕ್ರವಾರ ಮತ್ತು ವಾರಾಂತ್ಯದ ಶನಿವಾರ ಮತ್ತು ಭಾನುವಾರದಂದು ಲಕ್ಷಾಂತರ ಸಂಖ್ಯೆಯ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾಸ್‌ ವ್ಯವಸ್ಥೆ ರದ್ದುಪಡಿಸಲಾಗಿದೆ.

 ಮೈಸೂರು : ಆಷಾಢ ಮಾಸದ ಶುಕ್ರವಾರ ಮತ್ತು ವಾರಾಂತ್ಯಗಳಲ್ಲಿ ದೇವರ ದರ್ಶನಕ್ಕೆ ಧರ್ಮ ದರ್ಶನದ ಜತೆಗೆ 300 ಮತ್ತು 2000 ರು. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.27, ಜು.4, 11 ಮತ್ತು 18ರಂದು ಆಷಾಢ ಶುಕ್ರವಾರ ಮತ್ತು ವಾರಾಂತ್ಯದ ಶನಿವಾರ ಮತ್ತು ಭಾನುವಾರದಂದು ಲಕ್ಷಾಂತರ ಸಂಖ್ಯೆಯ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾಸ್‌ ವ್ಯವಸ್ಥೆ ರದ್ದುಪಡಿಸಲಾಗಿದೆ ಎಂದರು.

ಬದಲಿಗೆ ಉಚಿತ ಸಾರಿಗೆ ವ್ಯವಸ್ಥೆ ಎಂದಿನಂತೆಯೇ ಇರುತ್ತದೆ. ಬೆಟ್ಟದಲ್ಲಿ ನೂತನ ಮಾದರಿಯ ಸರದಿ ವ್ಯವಸ್ಥೆ ಮಾಡಲಾಗಿದೆ. ಧರ್ಮದ ದರ್ಶನದ ಜತೆಗೆ 300 ರು. ಹಾಗೂ 2 ಸಾವಿರಕ್ಕೆ ಎರಡು ರೀತಿಯ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಟಿಕೆಟ್‌ ಪಡೆದವರಿಗೆ ಎಸಿ ಬಸ್‌ನಲ್ಲಿ ಕರೆದೊಯ್ದು ಆದಷ್ಟು ಬೇಗ ದೇವರ ದರ್ಶನ ಮಾಡಿಸುವ ಜೊತೆಗೆ ಅವರಿಗೆ ಚಾಮುಂಡೇಶ್ವರಿಯ ಪ್ರಸಾದ, ತೀರ್ಥ, ಮರದ ಭರಣಿಯಲ್ಲಿ ಕುಂಕುಮ, ಕೈಗೆ ಕಟ್ಟುವ ದಾರ, ಚಾಮುಡೇಶ್ವರಿ, ಗಂಡುಬೇರುಂಡ ಮತ್ತು ಅಂಬಾರಿ ಹೊತ್ತ ಆನೆಯ ಮಾದರಿಯುಳ್ಳ ವಸ್ತುಗಳನ್ನು ಮರದ ಬಾಕ್ಸ್‌ ನಲ್ಲಿ ಇರಿಸಿ, ಅವುಗಳನ್ನು ಬಟ್ಟೆ ಬ್ಯಾಗ್‌ ಮೂಲಕ ಕೊಡಲಾಗುವುದು ಎಂದರು.

ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಉದ್ದೇಶದಿಂದ, ಬಟ್ಟೆ ಬ್ಯಾಗ್‌ ಬಳಸಲಾಗುತ್ತಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಪ್ರದೇಶವೆಂದು ಗುರುತಿಸಲಾಗಿರುವ ಜಮೀನುಗಳನ್ನು ಅರಣ್ಯ ಇಲಾಖೆ ನಿಯಮಾನುಸಾರ ಘೋಷಿಸಿದೆಯೇ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಮರು ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಒಂದು ಎಕರೆಯಲ್ಲಿ 50ಕ್ಕಿಂತ ಹೆಚ್ಚು ಸಸಿ ಇರುವ ಹಾಗೂ 30 ಮೆ.ಮೀ. ಗರಿಕೆ ಬೆಳೆದಿರುವ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಎನ್ನುವುದಾಗಿ ಘೋಷಿಸಲಾಗಿದೆ. ಈ ಜಮೀನುಗಳಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಕೆಲವರು ಅಕ್ರಮವಾಗಿ ತಮ್ಮದೆಂದು ಹೇಳಿಕೊಂಡು ಉಳುಮೆ ಮಾಡುತ್ತಿದ್ದಾರೆ. ಇದನ್ನು ಮರು ಪರಿಶೀಲನೆ ಮಾಡಿ ಮತ್ತೆ ವರದಿ ಕೊಡಬೇಕು ಎಂದು ಹೇಳಲಾಗಿದೆ. ಒಂದು ವೇಳೆ ಅರಣ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಘೋಷಣೆ ಮಾಡದಿದ್ದಲ್ಲಿ ಅಂತಹ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಮತ್ತು ರೈತರಿಗೆ ಬಿಡುವುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಸರ್ವೆ ನಡೆಸುವರು. ಯಾವ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆಯೇ ಎಂಬುದನ್ನು ಗಮನಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ:  ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾಗಿರುವ ಕಾರಣ ಈ ಬಾರಿ ಸುಧಾರಿಬೇಕಿದೆ. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ಎರಡು ಬಾರಿ ಅವಕಾಶ ನೀಡಿ ಪಾಸಾಗುವಂತೆ ಮಾಡಬೇಕಿದೆ. ಅನುತ್ತೀರ್ಣರಾದವರು ಪಾಸಾಗದಿದ್ದರೆ ಶಾಲೆಯಿಂದ ಹೊರಗುಳಿಯುವ ಪ್ರಮಾಣ ಹೆಚ್ಚಾಗಬಹುದು. ಆದ್ದರಿಂದ ಫಲಿತಾಂಶ ಸುಧಾರಣೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಉಪ ನಿರ್ದೇಶಕರು, ಬಿಇಒಗೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್.ವಿಷ್ಣುವರ್ಧನ, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ.ರೂಪಾ, ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷ ಎಂಜಿನಿಯರ್‌ ಕೆ. ಮಹೇಶ್, ಕೆಐಎಡಿಬಿ ಭೂ ವಿಶೇಷಾಧಿಕಾರಿ ಡಾ.ಎನ್.ಸಿ. ವೆಂಕಟರಾಜು, ಸೆಸ್ಕ್ ಅಧೀಕ್ಷಕ ಎಂಜಿನಿಯರ್‌ ಸುನಿಲ್, ತಹಸೀಲ್ದಾರ್ ಮಹೇಶ್ ಕುಮಾರ್ ಇದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ