ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು ಸೌಲಭ್ಯ

KannadaprabhaNewsNetwork |  
Published : Jan 30, 2026, 01:30 AM IST
ಪೋಟೋ: 29ಎಸ್‌ಎಂಜಿಕೆಪಿ08 | Kannada Prabha

ಸಾರಾಂಶ

ಸಾಗರ ಶ್ರೀ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಕೋರಿದ್ದ ತಮ್ಮ ಮನವಿಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌, ಇದೇ ಫೆ.3 ರಿಂದ 11 ರವರೆಗೆ, ತಾಳಗುಪ್ಪದವರೆಗೆ ವಿಸ್ತರಿಸಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಪ್ರಕಟಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ: ಸಾಗರ ಶ್ರೀ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಕೋರಿದ್ದ ತಮ್ಮ ಮನವಿಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌, ಇದೇ ಫೆ.3 ರಿಂದ 11 ರವರೆಗೆ, ತಾಳಗುಪ್ಪದವರೆಗೆ ವಿಸ್ತರಿಸಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಪ್ರಕಟಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಫೆ.3ರಿಂದ 11ರವರೆಗೆ ನಡೆಯಲಿರುವ ''''''''ಮಲೆನಾಡಿನ ಮಹಾಕುಂಭ'''''''' ಎಂದೇ ಪ್ರಸಿದ್ಧವಾಗಿರುವ ಸಾಗರ ತಾಲೂಕಿನ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಕೋರಿ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗೆ ಸಲ್ಲಿಸಲಾಗಿತ್ತು. ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಕುರಿತಂತೆ ಅಧಿಕೃತ ಆದೇಶ ಇನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಮಾರಿಕಾಂಬಾ ಜಾತ್ರೆಗೆ, ರಾಜ್ಯದ ನಾನಾ ಕಡೆಗಳಿಂದ ಅಂದಾಜು 25 ರಿಂದ 30 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ, ಸುರಕ್ಷಿತ ಪ್ರಯಾಣದ ಅನುಕೂಲ ಒದಗಿಸಲು ವಿಶೇಷ ರೈಲ್ವೆ ಸೌಲಭ್ಯ ಕಲ್ಪಿಸುವ ಅಗತ್ಯವನ್ನು ಒತ್ತಿ ಹೇಳಿ, ಕೇಂದ್ರ ಸರ್ಕಾರದ ವಿಶೇಷ ಪರಿಗಣನೆ ಹಾಗೂ ಸಹಕಾರ ಅಗತ್ಯವೆಂದು ಪ್ರತಿಪಾದಿಸಿದ್ದು, ಇದಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಸಂಸದರು, ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುತ್ತಿರುವ ರೈಲು ಸಂಖ್ಯೆ 16581/82 (ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್) ಅನ್ನು ಜಾತ್ರೆಯ ಅವಧಿಯಲ್ಲಿ, ಅಂದರೆ ಫೆಬ್ರವರಿ 3 ರಿಂದ 11 ರವರೆಗೆ, ಪ್ರತಿದಿನ ಓಡಿಸುವಂತೆ ಹಾಗೂ ಈ ರೈಲನ್ನು ಶಿವಮೊಗ್ಗದಿಂದ ಸಾಗರದ ಸಮೀಪದ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸುವಂತೆ ಕೋರಿದ್ದಾರೆ. ಸಂಸದರ ಕೋರಿಕೆ ಅನುಮೋದಿಸಿರುವ ರೈಲ್ವೆ ಇಲಾಖೆ ಶೀಘ್ರದಲ್ಲಿ ಈ ಕುರಿತು ಆದೇಶ ಹೊರಡಿಸಲಿದೆ. ಮಲೆನಾಡಿನ ರೈಲ್ವೆ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಸಂಸದರು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

"ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ, ಅನುಕೂಲ ಒದಗಿಸಬೇಕು, ಯಾವುದೇ ತೊಂದರೆಯಾಗಬಾರದು ಎನ್ನುವುದು ನನ್ನ ಆಶಯ. ಈ ತಾತ್ಕಾಲಿಕ ರೈಲ್ವೆ ಸೇವೆ ವ್ಯವಸ್ಥೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತಾಪೂರ್ವಕ ಅಭಿನಂದನೆ ಸಲ್ಲಿಸುವೆ " ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ವಿಶೇಷ ರೈಲ್ವೆ ಸೇವೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಾಗರದವರೆಗೆ ತಲುಪಲು ಸಾಧ್ಯವಾಗಲಿದ್ದು, ಜನದಟ್ಟಣೆ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ