ಜೈಲಲ್ಲಿರುವ ಉಗ್ರ, ರೇಪಿಸ್ಟ್‌ ಬಳಿ ಮೊಬೈಲ್‌, ಕಲರ್‌ ಟೀವಿ!

KannadaprabhaNewsNetwork |  
Published : Nov 09, 2025, 02:30 AM IST
umesh reddy 2 | Kannada Prabha

ಸಾರಾಂಶ

ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ‘ವಿಐಪಿ ಸೌಲಭ್ಯ’ ಕಲ್ಪಿಸಿರುವ ಅಕ್ರಮ ಬಯಲಾಗಿದೆ.

- ರಾಜ್ಯದ ಅತಿದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ- ವಿಡಿಯೋಗಳು ಬಿಡುಗಡೆಯಿಂದ ಸಂಚಲನ । ಇದೇನು ಜೈಲಾ? ಹಾಸ್ಟೆಲ್ಲಾ?: ಟೀಕೆ- ಸುಪ್ರೀಂಕೋರ್ಟ್‌ ತಪರಾಕಿ ಬಳಿಕವೂ ಎಚ್ಚೆತ್ತುಕೊಳ್ಳದ ಕಾರಾಗೃಹ ಅಧಿಕಾರಿಗಳು

---

ಜೈಲಧಿಕಾರಿಗಳಿಗೆದಯಾನಂದ್‌ ತರಾಟೆ- ವಿಚಾರಣೆ ನಡೆಸಿ ವರದಿ ನೀಡಲು ಸೂಚನೆ

ಕನ್ನಡಪ್ರಭ ವಾರ್ತೆ ಬೆಂಗಳೂರುಜೈಲಿನಲ್ಲಿ ಅಕ್ರಮದ ವಿಡಿಯೋಗಳು ಬಹಿರಂಗವಾದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿಗಳನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ.ದಯಾನಂದ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಅಕ್ರಮದ ಕುರಿತು ದಕ್ಷಿಣ ವಲಯ ಡಿಐಜಿ ದಿವ್ಯಾಶ್ರೀ ಅವರಿಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಡಿಜಿಪಿ ಸೂಚಿಸಿದ್ದಾರೆ. ಈ ವರದಿ ಬಳಿಕ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ತಲೆದಂಡವಾಗಲಿದೆ ಎಂದು ಮೂಲಗಳು ಹೇಳಿವೆ.

==

ದಿನಪತ್ರಿಕೆ ಚಿತ್ರೀಕರಿಸಿಸಾಚಾತನದ ಸಾಕ್ಷಿ?- ಬಹುತೇಕ ವಿಡಿಯೋ ಇತ್ತೀಚಿನದ್ದುಕನ್ನಡಪ್ರಭ ವಾರ್ತೆ ಬೆಂಗಳೂರುಜೈಲಿನಲ್ಲಿ ಕೈದಿಗಳ ವಿಲಾಸಿ ಬದುಕಿನ ಕುರಿತು ಬಿಡುಗಡೆಗೊಂಡಿರುವ ವಿಡಿಯೋಗಳ ಅಸಲಿತನಕ್ಕೆ ದಿನಪತ್ರಿಕೆಯನ್ನು ತೋರಿಸಲಾಗಿದೆ. ವಿಡಿಯೋಗಳಲ್ಲಿ ಆಂಗ್ಲ ದಿನಪತ್ರಿಕೆಯನ್ನು ತೋರಿಸಿ ದಿನಾಂಕ ಉಲ್ಲೇಖಿಸಿದ್ದಾರೆ. ಈಗ ಬಹಿರಂಗವಾದ ಐದು ವಿಡಿಯೋಗಳ ಪೈಕಿ ಒಂದನ್ನು ಮಾತ್ರ 2022ರಲ್ಲಿ ಚಿತ್ರೀಕರಿಸಲಾಗಿದೆ. ಇನ್ನುಳಿದವು ಇತ್ತೀಚಿನ ದಿನಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳಾಗಿವೆ ಎಂದು ತಿಳಿದು ಬಂದಿದೆ. ವಿಡಿಯೋಗಳ ಬಿಡುಗಡೆ ಹಿಂದಿನ ಕೈವಾಡ ಕುರಿತು ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

==

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ‘ವಿಐಪಿ ಸೌಲಭ್ಯ’ ಕಲ್ಪಿಸಿರುವ ಅಕ್ರಮ ಬಯಲಾಗಿದೆ.

ಕಾರಾಗೃಹದಲ್ಲಿ ಶಂಕಿತ ಐಸಿಸ್‌ ಉಗ್ರ ಶಕೀಲ್, ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಆರೋಪಿ ಮತ್ತು ಖ್ಯಾತ ಹೋಟೆಲ್ ಉದ್ಯಮಿ ಮೊಮ್ಮಗ, ನಟ ತರುಣ್ ಕೊಂಡರಾಜು ಕಾನೂನುಬಾಹಿರವಾಗಿ ಮೊಬೈಲ್, ಟೀವಿ ಸೇರಿ ಇತರೆ ಸೌಲಭ್ಯವನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ವಿಡಿಯೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ಕಾರಾಗೃಹ ಇಲಾಖೆಯ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಒಂದು ವಿಡಿಯೋದಲ್ಲಿ 13 ಮೊಬೈಲ್‌ಗಳು, ಇಯರ್ ಫೋನ್‌ ಹಾಗೂ ಚಾರ್ಜರ್‌ಗಳಿವೆ. ಅಲ್ಲದೆ ವಿಕೃತ ಕಾಮಿ ಉಮೇಶ್ ರೆಡ್ಡಿ ಸೆಲ್‌ನಲ್ಲಿ ಹಾಟ್ ಬಾಕ್ಸ್ ಸಹ ಪತ್ತೆಯಾಗಿದೆ. ಇನ್ನು ಶಂಕಿತ ಉಗ್ರನ ಸ್ಟೀಲ್‌ ಗ್ಲಾಸ್‌ನಲ್ಲಿ ಚಹಾ ತುಂಬಿಟ್ಟುಕೊಂಡಿರುವುದು ಕಂಡು ಬರುತ್ತದೆ.

ಜೈಲಿನಲ್ಲಿ ಕಾನೂನುಬಾಹಿರವಾಗಿ ಕೈದಿಗಳಿಗೆ ಸೌಲಭ್ಯ ಕಲ್ಪಿಸುವುದಕ್ಕೆ ನಟ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಇದಾದ ನಂತರವೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಕಾರಾಗೃಹ ಆಡಳಿತ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊಲೆ ಆರೋಪ ಹೊತ್ತು ಜೈಲಿನಲ್ಲಿದ್ದ ನಟ ದರ್ಶನ್‌ ತೂಗುದೀಪ, ಅವರ ಸಹಚರರು, ರೌಡಿಗಳಾದ ವಿಲ್ಸನ್ ಗಾರ್ಡನ್‌ ನಾಗರಾಜ, ಶ್ರೀನಿವಾಸ ಹಾಗೂ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಸೀನನಿಗೆ ವಿಶೇಷ ಸವಲತ್ತು ಕಲ್ಪಿಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಫೋಟೋ ಹಾಗೂ ವಿಡಿಯೋಗಳು ಬಹಿರಂಗವಾಗಿ ಭಾರಿ ವಿವಾದ ಸೃಷ್ಟಿಯಾಗಿತ್ತು. ನಟ ದರ್ಶನ್ ಅವರ ಜಾಮೀನು ಅರ್ಜಿ ರದ್ದುಪಡಿಸಿದ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ಜೈಲಿನ ವಿಐಪಿ ವ್ಯವಸ್ಥೆ ಬಗ್ಗೆ ಕಿಡಿಕಾರಿತ್ತು.

ಉಮೇಶ್ ರೆಡ್ಡಿಗೆ ಮೊಬೈಲ್, ಕಲರ್‌ ಟಿವಿ!

ವಿದೇಶದಲ್ಲಿ ಅಡಗಿ ಕುಳಿತು ಅತ್ಯುಗ್ರ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆಯಲ್ಲಿ ಬೆಂಗಳೂರಿನ ಜುಹಾದ್‌ ಹಮೀದ್ ಶಕೀಲ್ ಮನ್ನಾ ತೊಡಗಿಕೊಂಡಿದ್ದ. 2020ರಲ್ಲಿ ಸೌದಿ ಅರೇಬಿಯಾದಿಂದ ಗಡೀಪಾರಾಗಿದ್ದ ಆತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತ್ತು. ಅಂದಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ಶಕೀಲ್ ಇದ್ದಾನೆ.

ಇನ್ನು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ದಶಕಗಳಿಂದ ವಿಕೃತ ಕಾಮಿ ಉಮೇಶ್ ರೆಡ್ಡಿ ಜೈಲಿನಲ್ಲಿದ್ದಾನೆ. ಕೆಲ ಪ್ರಕರಣದಲ್ಲಿ ಆತ ಶಿಕ್ಷೆಗೆ ಗುರಿಯಾಗಿದ್ದರೆ, ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಕಳೆದ ಮಾರ್ಚ್‌ನಲ್ಲಿ ಡಿಜಿಪಿ ಮಲ ಮಗಳು ನಟಿ ರನ್ಯಾ ರಾವ್ ವಿರುದ್ಧ ವಿದೇಶದಿಂದ ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ ಉದ್ಯಮಿ ಮೊಮ್ಮಗ ಹಾಗೂ ತೆಲಗು ನಟ ತರುಣ್ ಕೊಂಡರಾಜು ಬಂಧನವಾಗಿದೆ. ರನ್ಯಾ ರಾವ್‌ ಜತೆ ಆತ್ಮೀಯ ಒಡನಾಟ ಹೊಂದಿದ್ದ ಆತ, ಇದೇ ಸ್ನೇಹದಲ್ಲಿ ವಿದೇಶದಿಂದ ಚಿನ್ನ ಸಾಗಾಣಿಕೆಗೆ ಸ್ನೇಹಿತೆಗೆ ಸಾಥ್ ನೀಡಿದ ಆರೋಪವಿದೆ. ಈತ ಸಹ ವಿಶೇಷ ಭದ್ರತಾ ವಿಭಾಗದಲ್ಲೇ ಇದ್ದಾನೆ. ಸೆರೆಮನೆಯಲ್ಲಿ ಈ ಮೂವರ ಕೈಗೆ ಮೊಬೈಲ್ ಸಿಕ್ಕಿದೆ. ಅಲ್ಲದೆ ಉಮೇಶ್ ರೆಡ್ಡಿಗೆ ಸೆಲ್‌ನಲ್ಲಿ ಬಣ್ಣದ ಟಿವಿ ಸಹ ಇದೆ.

ಜೈಲಿನಲ್ಲಿ ಸಹ ಕೈದಿಗಳ ಜತೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಶಕೀಲ್‌, ಉಮೇಶ್ ಹಾಗೂ ತರುಣ್ ಮಾತನಾಡುತ್ತಿರುವ ವಿಡಿಯೋಗಳು ಬಹಿರಂಗವಾಗಿವೆ. ಈ ವಿಡಿಯೋಗಳು ಬಹಿರಂಗವಾದ ಕಾರಾಗೃಹ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

==

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ