ಕಾಳಮ್ಮ ಗುರಿ ರಸ್ತೆಯ ಕಾಳಿಕಾಂಬ ಕಮಟೇಶ್ವರ ಸ್ವಾಮಿ ದೇವಾಲಯ, ಕೋರಗಂಡಹಳ್ಳಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಇಡೀ ದಿನ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಲಾರ
ಮಹಾಶಿವರಾತ್ರಿ ಪ್ರಯುಕ್ತ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ನಡೆಯಿತು. ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳ ಪ್ರಮುಖ ಶಿವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಲಾಗಿತ್ತು. ರಾತ್ರಿ ಜಾಗರಣೆಯ ಚಾತುರ್ಯಾಮ ಪೂಜೆ ಅತ್ಯಂತ ಶ್ರದ್ದಾಭಕ್ತಿಗಳಿಂದ ನಡೆದಿದ್ದು, ನಗರದ ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಾಲಯದಲ್ಲಿ ಇಶಾ ಫೌಂಡೇಷನ್ ಮಾದರಿ ಬೃಹತ್ ಯೋಗಿ ಶಿವನ ಮೂರ್ತಿ ಪ್ರತಿಷ್ಟಾಪಿಸಲಾಗಿತ್ತು. ದಕ್ಷಿಣ ಕಾಶಿ ಅಂತರಗಂಗೆಯ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ, ಜಲಕಂಠೇಶ್ವರಸ್ವಾಮಿ ದೇವಾಲಯ, ನಗರದ ದೊಡ್ಡಪೇಟೆಯ ನಂಜುಂಡೇಶ್ವರಸ್ವಾಮಿ, ಕಾಳಮ್ಮ ಗುರಿ ರಸ್ತೆಯ ಕಾಳಿಕಾಂಬ ಕಮಟೇಶ್ವರ ಸ್ವಾಮಿ ದೇವಾಲಯ, ಕೋರಗಂಡಹಳ್ಳಿಯ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯಗಳು ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಇಡೀ ದಿನ ನಡೆಯಿತು.ಶಿವರಾತ್ರಿ ಎಂದರೆ ಜನರು ಶ್ರದ್ಧೆಯಿಂದ ಉಪವಾಸವ್ರತ ಆಚರಿಸುವ ಅತಿ ಪ್ರಮುಖ ದಿನವಾಗಿದ್ದು, ದೇವಾಲಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನತೆ ಧಾವಿಸಿದ್ದು ಕಂಡು ಬಂತು.ಸೋಮೇಶ್ವರಸ್ವಾಮಿಯ ನಿಂಬೆ ಹಣ್ಣಿನ ದೀಪ:
ಮಹಾಶಿವರಾತ್ರಿ ಅಂಗವಾಗಿ ನಗರದ ಇತಿಹಾಸ ಪ್ರಸಿದ್ಧ ಸೋಮೇಶ್ವರಸ್ವಾಮಿ ದೇವಾಲಯಕ್ಕೆ ಮುಂಜಾನೆಯಿಂದಲೇ ಸಾವಿರಾರು ಮಂದಿ ಧಾವಿಸಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರಲ್ಲದೇ ದೇವಾಲಯದ ನಂದಿಯ ಮುಂಭಾಗ ಮಹಿಳೆಯರು ನಿಂಬೆಹಣ್ಣಿನ ದೀಪ ಬೆಳಗಿದರು.ಅಂತರಗಂಗೆಯಲ್ಲೂ ವಿಶೇಷ ಪೂಜೆ:
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಕಾಶಿವಿಶ್ವೇಶ್ವರಸ್ವಾಮಿ ಹಾಗೂ ಜಲಕಂಠೇಶ್ವರ ಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆದಿದ್ದು, ಪಾರಣೆಯಾದ ಸೋಮವಾರ ಅಂತರಗಂಗೆಯ ಕಾಶಿವಿಶ್ವೇಶ್ವರ ಸ್ವಾಮಿ ಲಿಂಗಕ್ಕೆ ಸೂರ್ಯನ ಮೊದಲ ಕಿರಣಗಳ ಅಭಿಷೇಕವಾಗಲಿದ್ದು, ದೇವಾಲಯದಲ್ಲಿ ಭಕ್ತರ ಆಗಮನಕ್ಕೆ ಸಿದ್ದತೆ ನಡೆದಿದ್ದು, ಅರ್ಚಕ ಮಂಜುನಾಥ ದೀಕ್ಷಿತ್ ಪೂಜೆ ನಡೆಸಿದರು. ವ್ಯಾಪಾರದ ಭರಾಟೆ:
ನಗರದ ಹಳೆ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆ, ರಂಗಮಂದಿರದ ಮುಂಭಾಗ, ದೊಡ್ಡಪೇಟೆ ಮುಖ್ಯರಸ್ತೆಯಲ್ಲಿ ಪಾರಣೆಗೆ ವ್ಯಾಪಾರ ಜೋರಾಗಿ ನಡೆದಿದ್ದು, ಶಿವರಾತ್ರಿ ಆಚರಣೆಗೆ ಅಗತ್ಯವಾದ ಶೇಂಗಾ, ಗೆಣಸು,ಕಬ್ಬು, ಹುರಿಹಿಟ್ಟು, ಬೇಲದ ಕಾಯಿ, ಹೂ ಮಾರಾಟಕ್ಕೆ ಜನಸಂದಣಿ ಸೇರಿದ್ದು ಕಂಡುಬಂತು. ಗ್ರಾಮೀಣ ವ್ಯಾಪಾರಿಗಳು ಗೆಣಸು, ಶೇಂಗಾ,ಬೇಲದ ಕಾಯಿ ರಾಶಿ ಹಾಕಿ ಮಾರುತ್ತಿದ್ದು, ಶಿವರಾತ್ರಿ ಉಪವಾಸ ಆಚರಣೆ ಮತ್ತು ಪಾರಣೆಯ ಹಬ್ಬ ಆಚರಣೆಗೆ ಸಿದ್ದತೆ ನಡೆದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.