
ಕುಂದಗೋಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಆಗಸ್ಟ್ ಅಂತ್ಯದೊಳಗೆ ಸಂಪೂರ್ಣವಾಗಿ ಬಗೆಹರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲೂಕು ಆಸ್ಪತ್ರೆಗೆ ಈಗಾಗಲೇ ಕೌನ್ಸಿಲಿಂಗ್ ಮೂಲಕ ಓರ್ವ ಮೂಳೆ ತಜ್ಞ ಹಾಗೂ ನೇತ್ರ ತಜ್ಞರನ್ನು ನೇಮಿಸಲಾಗಿದೆ. ಹಿಂದಿನ ವೈದ್ಯರು ದೀರ್ಘಕಾಲದ ರಜೆಯಲ್ಲಿದ್ದ ಕಾರಣ ಸ್ತ್ರೀರೋಗ ತಜ್ಞರ ಹುದ್ದೆ ಭರ್ತಿ ಮಾಡಲು ತಾಂತ್ರಿಕ ಅಡಚಣೆಯಾಗಿತ್ತು. ಇದೀಗ ಆ ಸಮಸ್ಯೆಯನ್ನು ಬಗೆಹರಿಸಿದ್ದು, ವಾರದಲ್ಲೇ ಹೊಸದಾಗಿ ಸ್ತ್ರೀರೋಗ ತಜ್ಞರ ನೇಮಕವಾಗಲಿದೆ ಎಂದರು.
ಈ ಹಿಂದೆ ನೀಡಿದ ಭರವಸೆಯಂತೆ ಹಂತ ಹಂತವಾಗಿ ಸಿಬ್ಬಂದಿ ಹಾಗೂ ಡಾಕ್ಟರ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.ಇದೇ ವೇಳೆ, ಕಮಡೊಳ್ಳಿ ಗ್ರಾಮಕ್ಕೆ ಆಸ್ಪತ್ರೆ ಮಂಜೂರಾಗಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಜಾಗ ಕೊಟ್ಟಾಗಲೇ ಬಿಜೆಪಿ ಸರ್ಕಾರವೇ ಆಸ್ಪತ್ರೆ ನಿರ್ಮಿಸಬೇಕಿತ್ತು. ನಾವು ಈ ಅವಧಿಯಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿಲ್ಲ. ಜನರ ಬೇಡಿಕೆಯನ್ನು ಪರಿಗಣಿಸಿ, ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಖಂಡಿತ ಪರಿಶೀಲನೆ ನಡೆಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾಜಿ ಶಾಸಕ ಎಂ.ಎಸ್. ಅಕ್ಕಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಾನಂದ ಬೆಂತೂರ, ಕಾಂಗ್ರೆಸ್ ಮುಖಂಡರಾದ ಅರವಿಂದಪ್ಪ ಕಟಗಿ, ಚಂದ್ರಶೇಖರ ಜುಟ್ಟಲ್ ಹಾಗೂ ಗೌಡಪ್ಪಗೌಡ ಪಾಟೀಲ ಹಾಗೂ ಸದಾನಂದ ಡಂಗನವರ, ಸಚಿವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕನಗೌಡ ಹಿರೇಗೌಡ್ರ, ಸಲೀಂ ಕ್ಯಾಲಕೊಂಡ, ವಿಜಯಕುಮಾರ ಹಾಲಿ, ಸತೀಶ ಕೊಬ್ಬಯ್ಯನವರಮಠ, ಮಂಜು ಮಾಳಪ್ಪನವರ, ದಯಾನಂದ ಕುಂದೂರ, ಸಕ್ರಪ್ಪ ಲಮಾಣಿ, ಮಂಜು ಪೂಜಾರ, ಮಂಜುನಾಥ ಕಟಗಿ, ಸಿದ್ದಪ್ಪ ಹುಣಸಣ್ಣವರ, ಮಾಬುಲಿ ನದಾಫ್, ಗುರು ಚಲವಾದಿ, ಬಾಬಾ ಜಾನ್ ಮಿಶ್ರಿಕೋಟಿ, ಬಸವರಾಜ ಶಿರಸಂಗಿ, ಗಂಗಾಧರ ಪಾಣಿಗಟ್ಟಿ, ಯಲ್ಲಪ್ಪ ಶಿಂಗಣ್ಣವರ, ಮುತ್ತು ಯರಿನಾರಾಯಣಪೂರ ಸೇರಿದಂತೆ ಅನೇಕರಿದ್ದರು.