ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಸ್ವಾಧೀನ ತ್ವರಿತಗೊಳಿಸಿ: ಡಿಸಿ ಡಾ. ವಿದ್ಯಾಕುಮಾರಿ

KannadaprabhaNewsNetwork |  
Published : Jun 27, 2024, 01:01 AM IST
ಲ್ಯಾಂಡ್26 | Kannada Prabha

ಸಾರಾಂಶ

ಶಿವಪುರದ ಕೆರೆಬೆಟ್ಟು ಹಾಗೂ ನಿಟ್ಟೆ ವ್ಯಾಪ್ತಿ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು. ಅವರು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಗುರುತಿಸಿರುವ ಶಿವಪುರದ ಕೆರೆಬೆಟ್ಟು ಹಾಗೂ ನಿಟ್ಟೆಯ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಭೂಸ್ವಾಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಕ್ಲಸ್ಟರ್ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಿಸಿ, ಉದ್ಯೋಗ ಸೃಷ್ಟಿಸಿ, ಸ್ಥಳೀಯ ಜನರಿಗೆ ಉದ್ಯೋಗ ಲಭಿಸಬೇಕೆಂಬ ಆಶಯದೊಂದಿಗೆ ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕೆ.ಐ.ಡಿ.ಬಿ. ಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ ಕೇವಲ ಡಿ ಗ್ರೂಪ್ ಹುದ್ದೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಇತರ ಎಲ್ಲ ಹುದ್ದೆಗಳಲ್ಲಿಯೂ ಸ್ಥಳೀಯರ ನೇಮಕಾತಿ ಮಾಡಬೇಕು. ನೇಮಕಾತಿಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಹಂಚಿಕೆಯಾಗಿರುವ ಜಮೀನಲ್ಲಿ ಕೈಗಾರಿಕೆಗಳನ್ನು ನಿರ್ದಿಷ್ಟ

ಸಮಯದಲ್ಲಿ ಪ್ರಾರಂಭಿಸಬೇಕು. ಪ್ರಾರಂಭಿಸದೇ ಇದ್ದಲ್ಲಿ ಕೆ.ಐ.ಡಿ.ಬಿ ಕಾಯ್ದೆ ಅನ್ವಯ ಶೇ.2 ರಷ್ಟು

ಹೆಚ್ಚುವರಿ ಶುಲ್ಕ ವಸೂಲಿ ಮಾಡಬೇಕು. ಕೈಗಾರಿಕೆ ಚಟುವಟಿಕೆ ಬದಲಾವಣೆ ಮಾಡಿ ನಡೆಸುತ್ತಿದ್ದಲ್ಲಿ ಅವುಗಳಿಗೆ ಪೂರ್ವಾನುಮತಿ ಪಡೆಯದೆ ಇದ್ದಲ್ಲಿ ನೋಟಿಸ್ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳಿಗೆ ವಿದೇಶಿ ರಫ್ತನ್ನು ಉತ್ತೇಜಿಸಿ, ಹೆಚ್ಚಿಸಬೇಕು. ಮೀನಿನ ಉತ್ಪಾದನೆಯು ಸಹ ಹೆಚ್ಚಿದೆ. ಎಕ್ಸ್ಪೋರ್ಟ್ ಕಮಿಟಿಗಳು ವಿದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲ ಮಾಡಿಕೊಡಲು ಅನೇಕ ಸಲಹೆಗಳನ್ನು ನೀಡಬೇಕು. ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದ ಅವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ನಗರಸಭೆ ಪೌರಾಯುಕ್ತ ರಾಯಪ್ಪ, ಲೀಡ್ ಬ್ಯಾಂಕ್ ಮ್ಯಾನೆಜರ್ ಹರೀಶ್, ಕೆ.ಐ.ಡಿ.ಬಿ ಶ್ರೀನಿವಾಸ ಮೂರ್ತಿ, ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ