ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸಿಮ್ಸ್ ಆಸ್ವತ್ರೆಯಲ್ಲಿ ಪ್ರಥಮ ಬಾರಿಗೆ ನ.೮ರಂದು ಬೆನ್ನು ಹುರಿಗೆ ಎಂಡೋಸ್ಪೈನ್ ಸರ್ಜರಿ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಜಿಲ್ಲಾ ಸರ್ಜನ್ ಡಾ.ಕೃಷ್ಣಪ್ರಸಾದ್ ತಿಳಿಸಿದರು.ನಗರದ ತಾಯಿ-ಮಗು ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮೆಡಿಕಲ್ ಕೌನ್ಸಿಲ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ಮೂಳೆಚಿಕಿತ್ಸಾ ಸೊಸೈಟಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಸಿಮ್ಸ್ ಶಿಕ್ಷಕರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಚಾಮರಾಜನಗರ, ಕರ್ನಾಟಕ ಸರ್ಕಾರಿ ವೈದ್ಯಕೀಯ ಕಚೇರಿಗಳ ಸಂಘ, ಸಿಮ್ಸ್ ಆರ್ಥೋಪೆಡಿಕ್ಸ್ ವಿಭಾಗ, ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್, ಮೈಸೂರು ಆರ್ಥೋಪೆಡಿಕ್ ಅಸೋಸಿಯೇಷನ್ ಇಂಬೈ ಮತ್ತು ಚಾಮರಾಜನಗರ ಆರ್ಥೋಪೆಡಿಕ್ ಸರ್ಜನ್ಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಸಿಮ್ಸ್ ಆಸ್ಪತ್ರೆಯಲ್ಲಿ ಈ ಸರ್ಜರಿ ಮೂವರು ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ಉಚಿತವಾಗಿ ನಡೆಯಲಿದೆ ಎಂದರು.ಪ್ರಖ್ಯಾತ ವೈದ್ಯರಾದ ಚನ್ನೈನ ಡಾ.ಕೀರ್ತಿವಾಸನ್, ಡಾ.ರವಿಕುಮಾರ್, ಮಂಗಳೂರಿನ ಡಾ.ಮಹೇಶ್, ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಡಾ.ರವೀಂದ್ರನಾಥ್, ಡಾ.ಮೃತ್ಯಂಜಯ ಈ ಸರ್ಜರಿ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದು, ಸಿಮ್ಸ್‌ನಲ್ಲಿ ಇದು ಮೊಟ್ಟ ಮೊದಲ ಬಾರಿಗೆ ನಡೆಯಲಿದೆ ಎಂದರು.ನ.೮ರ ಬೆಳಗ್ಗೆ ೮ ಗಂಟೆಯಿಂದ ೧೧.೩೦ರವರಗೆ ಬೆನ್ನು ಹುರಿಯ ಬಗ್ಗೆ ನಡೆದ ಬಂದ ಹಾದಿ, ಅದಕ್ಕೆ ಮಾಡುತ್ತಿದ್ದ ಶಸ್ತ್ರ ಚಿಕಿತ್ಸೆ, ಈಗ ಇದಕ್ಕೆ ಅತ್ಯಾಧುನಿಕ ಎಂಡೋಸ್ಪೈನ್ ಮಾಡುತ್ತಿರುವ ಬಗ್ಗೆ ಉಪನ್ಯಾಸ ಮತ್ತು ವಿವರಣೆ ನಡೆಯಲಿದ್ದು, ಆನಂತರ ಮೂವರು ಫಲಾನುಭವಿಗಳಿಗೆ ಎಂಡೋಸ್ಪೈನ್ ಸರ್ಜರಿ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.ಪ್ರಸ್ತುತ ಒತ್ತಡದ ಜೀವನ, ಒಂದು ಕಡೆ ಕುಳಿತು ಮಾಡುವ ಕೆಲಸ, ಆಹಾರ ಸೇವನೆ ಕ್ರಮ, ಆಹಾರ ಪದ್ದತಿ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸದೇ ಇರುವುದರಿಂದಾಗಿ ಬೆನ್ನು ಹುರಿ ಹೆಚ್ಚಿನ ಜನರಿಗೆ ಬಾದಿಸುತ್ತಿದೆ, ಇದಕ್ಕೆ ಬೆನ್ನಿನ ಭಾಗ ತೆರೆದು ಮಾಮೂಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದೆವು, ಈಗ ಅತ್ಯಾಧುನಿಕ ಎಂಡೋಸ್ಪೈನ್ ಸರ್ಜರಿ ಮಾಡಲಾಗುತ್ತಿದೆ ಇದರಿಂದಾಗಿ ಸರ್ಜರಿ ಮಾಡಿಸಿಕೊಂಡವರು ಒಂದೆರಡು ದಿನದಲ್ಲೇ ಮನೆಗೆ ಹೋಗಬಹುದಾಗಿದೆ ಎಂದರು.ಸಿಮ್ಸ್ ಆರ್ಥೋಪೆಡಿಕ್ಸ್ ವಿಭಾಗದ ಡಾ.ಮಾರುತಿ ಮಾತನಾಡಿ, ನಮ್ಮ ಸಿಮ್ಸ್‌ನಲ್ಲಿ ಸರ್ಜರಿ ಮಾಡುತ್ತಿರುವುದು ಹೆಮ್ಮೆಯ ವಿಷಯ, ಬೇರೆ ಕಡೆ ೨ ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತಿದೆ, ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ಹಾಗೂ ಎಸ್ಸಿ, ಎಸ್ಟಿಗಳಿಗೆ ಉಚಿತವಾಗಿ ಮಾಡಲಾಗುತ್ತಿದ್ದು ಬೇರೆಯವರಿಗೆ ೫೦ ರಿಂದ ೬೦ ಸಾವಿರದಲ್ಲಿ ಸರ್ಜರಿ ಮಾಡಲಾಗುತ್ತಿದೆ, ಈ ರೀತಿಯ ಸರ್ಜರಿ ಮತ್ತು ಪ್ರಾತ್ಯಕ್ಷಿಕೆ ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಕಾರ್ಯಕ್ರಮದದಲ್ಲಿ ಪರಿಸರ ಪ್ರೇಮಿ ವೆಂಕಟೇಶ್, ವಿಕಲಚೇತನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜಣ್ದ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ವಿವಿಧ ರಾಜ್ಯಗಳಿಂದ ಬರುವ ವೈದ್ಯರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರದ ಡಾ. ಬಸವರಾಜೇಂದ್ರ ಮತ್ತು ಸಿಮ್ಸ್ ಆರ್ಥೋಪೆಡಿಕ್ಸ್ ವಿಭಾಗದ ಎಲ್ಲಾ ವೈದ್ಯರು, ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದರು. ಸಿಮ್ಸ್‌ನ ಆರ್‌ಎಂಒ ಡಾ.ಮಹೇಶ್ ಆರ್ಥೋಪೆಡಿಕ್ಸ್ ವಿಭಾಗದ ಡಾ. ರಾಘವೇಂದ್ರ ಇದ್ದರು.