ಕನ್ನಡಪ್ರಭ ವಾರ್ತೆ ಮೈಸೂರುಭಾರತದಲ್ಲಿ ನಡೆದ ಶಕ್ತಿಯುತ ಮತ್ತು ದೀರ್ಘಾವಧಿ ಚಳವಳಿ ಸಂಘಟಿಸಿದ್ದು ದಸಂಸ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.ಒಡಲು ಟ್ರಸ್ಟ್ ಮತ್ತು ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಐಕ್ಯತೆಯ ಚೇತನ: ಪ್ರೊ.ಬಿ. ಕೃಷ್ಣಪ್ಪ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.1970- 80ರ ದಶಕದಲ್ಲಿ ಕ್ರಿಯಾಶೀಲ ಮನಸ್ಸುಗಳು ಕಟ್ಟಿದ ದಲಿತ ಸಂಘರ್ಷ ಸಮಿತಿ ಯುಗದ ಉತ್ಸಾಹ. ಸಮಾಜ ವಿಜ್ಞಾನಿ ಪ್ರೊ.ಬಿ. ಕೃಷ್ಣಪ್ಪ ಜಾತಿ ದೌರ್ಜನ್ಯದ ಬರ್ಬರತೆಯನ್ನು ಸ್ವ ಅನುಭವಿಸುತ್ತ ದಿಕ್ಕು ತೋರಿದ ನಾಯಕ ಎಂದು ಅವರು ಬಣ್ಣಿಸಿದರು.ಭಾರತದಲ್ಲಿ ನಡೆದ ಶಕ್ತಿಯುತ ಮತ್ತು ದೀರ್ಘಾವಧಿ ಚಳವಳಿ ಸಂಘಟಿಸಿದ್ದು ದಸಂಸ ಮತ್ತು 1980ರ ದಶಕದಲ್ಲಿ ಸರ್ಕಾರ ಹೆದರುತ್ತಿದ್ದು ವಿರೋಧ ಪಕ್ಷಕ್ಕಲ್ಲ. ದಸಂಸಗೆ ಎಂದು ಅಂಬೇಡ್ಕರ್ ವಾದಿ ವಿದ್ವಾಂಸರಿಬ್ಬರು ಅಭಿಪ್ರಾಯಪಟ್ಟಿದ್ದಾರೆ. ದಸಂಸದ ಆ ಶಕ್ತಿಯನ್ನು ಇಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದು ಅವರು ಹೇಳಿದರು.ಲೇಖಕಿ ಇಂದಿರಾ ಕೃಷ್ಣಪ್ಪ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ತನ್ನ 50 ವರ್ಷಗಳ ಹೋರಾಟವೂ ನಿಂತ ನೀರಾಗಿದ್ದ ಭಾರತದ ಜನಸಂಸ್ಕೃತಿಗೆ ಹೊಸ ಆಯಾಮ ಕೊಟ್ಟಿತು. ಹಿಂದೂ ರಾಷ್ಟçದ ಹೆಸರಿನಲ್ಲಿ ಜಾತೀಯತೆ, ತಾರತಮ್ಯವನ್ನು ಬಲಪಡಿಸುವ ದುಷ್ಟ ಆಲೋಚನೆಯಿಂದ ಭಾರತವನ್ನು ಉಳಿಸಬೇಕು ಎಂದು ತಿಳಿಸಿದರು.