-----------ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣ ಪ್ರಧಾನ ಅಂಚೆ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬೀದಿ ಬದಿ ವ್ಯಾಪಾರಿಗಳು ಅತಿ ಕ್ರಮಿಸಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಓಡಾಡಲು ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ನಂಜನಗೂಡಿನ ಅಂಚೆ ಕಚೇರಿಯು ಚಾಮರಾಜನಗರ ಭಾಗದ ಉಪ ವಿಭಾಗದ ಪ್ರಧಾನ ಕಚೇರಿಯೂ ಆಗಿರುವುದರಿಂದ ಇಲ್ಲಿ ದಿನನಿತ್ಯ ಅಂಚೆ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಕಚೇರಿಯ ಗ್ರಾಹಕರು ಮತ್ತು ಸಾರ್ವಜನಿಕರು ಭೇಟಿ ನೀಡುತ್ತಾರೆ,ಆದರೆ ಮುಖ್ಯರಸ್ತೆಯಿಂದ ಪ್ರಧಾನ ಅಂಚೆ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬೀದಿಬದಿ ವ್ಯಾಪಾರಿಗಳು ಎರಡು ಕಡೆಗಳಲ್ಲಿ ಅತಿಕ್ರಮಿಸಿಕೊಂಡಿರುವ ಕಾರಣ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ವಯೋವೃದ್ಧರು, ಮತ್ತು ವಿಕಲಾಂಗರು ಆಟೋದಲ್ಲಿ ಸಂಚರಿಸಲು ಕೂಡ ಸಾಧ್ಯವಿಲ್ಲ, ದ್ವಿಚಕ್ರ ವಾಹನ ಸಂಚಾರಕ್ಕೂ ಅವಕಾಶವಿಲ್ಲದಂತೆ ಬೀದಿ ಬದಿ ವ್ಯಾಪಾರಿಗಳು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆಈ ಬಗ್ಗೆ ಸಾರ್ವಜನಿಕರು ದಾರಿ ಬಿಡುವಂತೆ ಪ್ರಶ್ನಿಸಿದ್ದಲ್ಲಿ, ಅವರ ಮೇಲೆ ಹಲ್ಲೆ ನಡೆಸುವ, ಅವ್ಯಾಚ್ಯ ಶಬ್ದಗಳಿಂದ ನಿಂದಿಸುವಂತಹ ಪ್ರಕರಣಗಳು ದಿನನಿತ್ಯ ಜರುಗುತ್ತಿವೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಧಾನ ಅಂಚೆ ಅಧಿಕ್ಷಕರಿಗೆ ಹಲವಾರು ಬಾರಿ ದೂರು ನೀಡಲಾಗಿದೆ. ಎರಡು ದಿನಕ್ಕೆ ಮಾತ್ರ ಒತ್ತುವರಿ ತೆರವು ಆಗುವ ಈ ರಸ್ತೆಯು ನಂತರ ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಣಕ್ಕೆ ಒಳಗಾಗುತ್ತದೆ. ಈ ಬಗ್ಗೆ ಅಂಚೆ ಅಧಿಕರು ಪೊಲೀಸ್ ಠಾಣೆ ಮತ್ತು ನಗರಸಭೆಗೆ ಪತ್ರ ಬರೆದು ಒತ್ತುವರಿ ತೆರವುಗೊಳಿಸುವಂತೆ ತಿಳಿಸಿದ್ದರೂ ಸಹ ಪೊಲೀಸರಾಗಲಿ, ನಗರ ಸಭೆಯ ಅಧಿಕಾರಿಗಳಾಗಲಿ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಪಾದಾಚಾರಿ ರಸ್ತೆಗಳು ಸಾರ್ವಜನಿಕರ ಹಕ್ಕು ಎಂದು ನ್ಯಾಯಾಲಯ ಆದೇಶ ನೀಡಿದ್ದರು ಸಹ ನಂಜನಗೂಡು ನಗರಸಭೆಯ ಅಧಿಕಾರಿಗಳು ಮತ್ತು ಪೊಲೀಸರು ಒತ್ತುವರಿ ತೆರವುಗೊಳಿಸಲು ಮುಂದಾಗದಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿವೆ. ಮುಂದಿನ ದಿನಗಳಲ್ಲಾದರೂ ಸಹ ಅಂಚೆ ಅಧೀಕ್ಷಕರು, ಪೊಲೀಸರು, ನಗರ ಸಭೆಯ ಅಧಿಕಾರಿಗಳು ಕ್ರಮವಹಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವುದೇ ಎಂಬುದನ್ನು ಕಾದು ನೋಡಬೇಕಿದೆ. ------------ನಂಜನಗೂಡು ಉಪ ವಿಭಾಗದ ಪ್ರಧಾನ ಅಂಚೆ ಕಚೇರಿಯಾಗಿರುವುದರಿಂದ, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಾರೆ, ಈ ರಸ್ತೆಯು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸಹಜವಾಗಿ ಜನರ ಓಡಾಟ ಹೆಚ್ಚಾಗಿರುತ್ತದೆ, ಇದನ್ನೇ ಬಂಡವಾಳ ಮಾಡಿಕೊಂಡ ಬೀದಿಬದಿ ವ್ಯಾಪಾರಿಗಳು ಸಾರ್ವಜನಿಕರು ಓಡಾಟಕ್ಕೂ ಜಾಗ ಬಿಡದಂತೆ ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚರಿಸಲು ಕಷ್ಟವಾಗುತ್ತದೆ. ದಾರಿ ಬಿಡುವಂತೆ ವ್ಯಾಪಾರಸ್ಥರನ್ನು ಪ್ರಶ್ನೆ ಮಾಡಿದ್ದಲ್ಲಿ ಅವರು ಖ್ಯಾತೆ ತೆಗೆದು ಹಲ್ಲೆ ನಡೆಸಲು ಮುಂದಾಗುತ್ತಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು. - ಚಿನ್ನಸ್ವಾಮಿ. ಗ್ರಾಹಕ--------------ಈ ರಸ್ತೆಯನ್ನು ಒತ್ತುವರಿ ತಿಳುವಳಿಸುವಂತೆ, ಸಾರ್ವಜನಿಕರು ಒತ್ತಾಯಿಸಿದಾಗ ಮಾತ್ರ ನೆಪ ಮಾತ್ರಕ್ಕೆ ಒಂದು ದಿನ ತೆರವುಗೊಳಿಸುತ್ತಾರೆ, ನಂತರ ವ್ಯಾಪಾರಸ್ಥರು ಅತಿಕ್ರಮಿಸಿಕೊಳ್ಳುತ್ತಾರೆ, ಸಾರ್ವಜನಿಕರ ಭವಣೆ ನಿತ್ಯ ತಪ್ಪಿದ್ದಲ್ಲ. ಅಧಿಕಾರಿಗಳು ಕ್ರಮವಹಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಇಲ್ಲವಾದಲ್ಲಿ, ಪ್ರಧಾನ ಮಂತ್ರಿ ಪೋರ್ಟಲ್ಲಿ ದೂರು ನೀಡಲಾಗುವುದು.- ಹರೀಶ್ ಕುಮಾರ್. --------------eom/mys/lss/