ಕನ್ನಡಪ್ರಭ ವಾರ್ತೆ ಮೈಸೂರುಕೆಪಿಸಿಸಿ ಸದಸ್ಯ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರ ಹುಟ್ಟಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಸದುಪಯೋಗಪಡಿಸಿಕೊಂಡರು.ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರವು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೂ ನಡೆಯಿತು. ಕೆ.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳಿಂದ ಕುಟುಂಬ ಸಮೇತ ಆಗಮಿಸಿದ್ದ ಸಾವಿರಾರು ಜನರು, ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆಗೆ ಒಳಗಾದರು.ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಳಿಗೆಯಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಮುಗಿಬಿದ್ದರು.ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು ರೇಸ್ ಕ್ಲಬ್ ಕಣ್ಣಿನ ಆಸ್ಪತ್ರೆ, ಜೆ.ಎಸ್.ಎಸ್. ದಂತ ವೈದ್ಯಕೀಯ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ಸೇರಿದಂತೆ ಹತ್ತಾರು ಆಸ್ಪತ್ರೆಗಳ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಪ್ರತ್ಯೇಕ ಮಳಿಗೆಗಳಲ್ಲಿ ಪರೀಕ್ಷೆ ನಡೆಸಿ ಆರೋಗ್ಯ ಸಲಹೆ ನೀಡಿದರು. ಅರ್ಥಪೂರ್ಣ ಆಚರಣೆಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ.ಕೆ.ಎಸ್. ರಾಜಣ್ಣ, ಬಡ, ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೌಲಭ್ಯ ಪಡೆದುಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದುಬಾರಿಯಾಗಿದೆ. ಹೀಗಾಗಿ ಹುಟ್ಟಹಬ್ಬ ಕ್ಷಣಿಕ ಸಂತೋಷ ಆಗಬಾರದು. ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಆಚರಣೆ ಆಗಬೇಕೆಂದು ಉದ್ದೇಶದಿಂದ ಆರೋಗ್ಯ ಶಿಬಿರ ಆಯೋಜಿಸಿರುವ ಎಚ್.ವಿ. ರಾಜೀವ್ ಮತ್ತು ಅವರ ಸ್ನೇಹ ಬಳಗದ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕೆ.ಆರ್. ಆಸ್ಪತ್ರೆಗೆ 10 ವ್ಹೀಲ್ ಚೇರ್‌ಗಳು ಹಾಗೂ 2 ಬ್ಯಾಟರಿ ಆಪರೇಟೆಡ್ ವ್ಹೀಲ್ ಚೇರ್‌ಗಳನ್ನು ವಿತರಿಸಲಾಯಿತು. ಆಯ್ದ 20 ಬೀದಿ ಬದಿ ವ್ಯಾಪಾರಿಗಳಿಗೆ ಮೇಲು ಹೊದಿಕೆಯುಳ್ಳ ತಳ್ಳುಗಾಡಿಗಳನ್ನು ಹಸ್ತಾಂತರಿಸಲಾಯಿತು. ಕನಕಗಿರಿ ಸರ್ಕಾರಿ ಶಾಲೆಗೆ 100 ಚೇರ್‌ಗಳನ್ನು ವಿತರಿಸಲಾಯಿತು.ಶಾಸಕ ಕೆ. ಹರೀಶ್‌ಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮಾಜಿ ಮೇಯರ್‌ಗಳಾದ ನಾರಾಯಣ್, ಪುರುಷೋತ್ತಮ್, ಬಿ.ಎಲ್. ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಶಿವಣ್ಣ, ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ್ ಮೊದಲಾದವರು ಇದ್ದರು.ಈ ವೇಳೆ ಮಾತನಾಡಿದ ಎಚ್.ವಿ. ರಾಜೀವ್‌ಅವರು, ನಾನು ಯಾವ ವರ್ಷವೂ ಹುಟ್ಟಹಬ್ಬ ಆಚರಿಸಿಕೊಂಡವನಲ್ಲ. ಬಡತನ ಮತ್ತು ಬಡವರ ನಡುವೆ ಬೆಳೆದವನು. ಸಮ ಸಮಾಜದ ಜಾಗೃತಿ ಇಟ್ಟುಕೊಂಡು ನನ್ನ ಕೈಲಾದಷ್ಟು ಕಿಂಚಿತ್ತು ಸೇವೆಯನ್ನು ಸದಾಕಾಲ ಮಾಡಿಕೊಂಡು ಬಂದಿದ್ದೇನೆ. ಸಾವಿರಾರು ಜನರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿರುವುದು ಕಾರ್ಯಕ್ರಮದ ಅಗತ್ಯತೆ ತೋರಿಸುತ್ತಿದೆ. ಮುಂದಿನ ದಿನಗಳಲ್ಲೂ ಸಮಾಜಮುಖಿಯಾಗಿ ಬದುಕುತ್ತೇನೆ ಎಂದರು.------------------eom/mys/dnm/