ಕನ್ನಡಪ್ರಭ ವಾರ್ತೆ ಹರಿಹರ
ಮಾನವೀಯ ಸಂಬಂಧಗಳು ಹಿಂದೆಂದಿಗಿಂತ ಇಂದು ಶಿಥಿಲಗೊಳ್ಳುತ್ತಿವೆ. ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಹೃದಯ ಶ್ರೀಮಂತಿಕೆ ಬೇಕು. ನಿಜವಾದ ಆಧ್ಯಾತ್ಮ ಅರಿವಿನಿಂದ ಬದುಕಿಗೆ ಶಾಂತಿ ದೊರಕುವುದೆಂದು ಬಾಳೆಹೊನ್ನೂರಿನ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ರೇಣುಕಾಚಾರ್ಯ ಮಂದಿರದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾವು ಸುಖ ಸಂತೋಷ ಬಯಸುವಂತೆ, ಪರರಿಗೂ ಬಯಸುವುದು ನಿಜವಾದ ಧರ್ಮ. ಉತ್ತಮ ಹೆಸರು ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವುದು. ಸುಳ್ಳು ಹೇಳಲು ಹಲವು ದಾರಿ. ಸತ್ಯಕ್ಕೆ ಇರುವುದೊಂದೇ ದಾರಿ. ಮುಳ್ಳಿನ ನಡುವೆ ಗುಲಾಬಿ ಹೂ ಸುಗಂಧ ಪರಿಮಳ ಬೀರುವ ಹಾಗೆ ಕಷ್ಟಗಳ ನಡುವೆ ಬಾಳಿ ಬದುಕಿದರೂ ಆದರ್ಶಗಳನ್ನು ಬಿಡಬಾರದು. ಕೈಲಾಸಕ್ಕಿಂತ ಕಾಯಕ, ಧರ್ಮಕ್ಕಿಂತ ದಯಾ, ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ, ಭೌತಿಕ ಆಸ್ತಿಗಿಂತ ಆರೋಗ್ಯ, ಮಾನ ಸನ್ಮಾನಕ್ಕಿಂತ, ಸಂಸ್ಕಾರ ಅತ್ಯಂತ ಮುಖ್ಯ. ಶಿವಜ್ಞಾನ ಎಂಬ ತೈಲವನ್ನೆರೆದು ಶಿವಜ್ಞಾನವೆಂಬ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ನಿಜವಾದ ಗುರು ಎಂದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಭೌತಿಕ ಬದುಕು ಸದೃಢಗೊಳ್ಳಲು ಧರ್ಮದ ಅರಿವು ಆಚರಣೆ ಮುಖ್ಯ. ಜೀವನದ ಜಂಜಡದಲ್ಲಿ ಸಿಲುಕಿರುವ ಮನುಷ್ಯನಿಗೆ ಗುರು ಹಿರಿಯರ ಆಶೀರ್ವಾದ ಅವಶ್ಯಕ. ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯವೆಂದರು. ಹರಪನಹಳ್ಳಿ ತಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಶ್ರೀ ನೇತೃತ್ವ ವಹಿಸಿ ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವೀರಶೈವ ಧರ್ಮ ಗಂಡು ಹೆಣ್ಣು, ಮೇಲು ಕೀಳು, ಬಡವ ಬಲ್ಲಿದ ಎನ್ನದೆ, ಎಲ್ಲರಿಗೂ ಸಂಸ್ಕಾರ ನೀಡಿದ ಶ್ರೇಯಸ್ಸು ಈ ಧರ್ಮಕ್ಕೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸಂತ್ಕ್ರಾಂತಿ ಎಲ್ಲ ಕ್ರಾಂತಿಗಳಿಗೆ ಮೂಲ ಗಂಗೋತ್ರಿ ಎಂದರು. ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.
ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್ ಅವರಿಗೆ ‘ಧರ್ಮಸೇವಾ ವಿಭೂಷಣ’ ಪ್ರಶಸ್ತಿಯನ್ನು ನೀಡಿ ರಂಭಾಪುರಿ ಶ್ರೀ ಶುಭ ಹಾರೈಸಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಲೆಬೆನ್ನೂರಿನ ಶ್ರೀ ವೀರಭದ್ರೇಶ್ವರ ಟ್ರಸ್ಟಿನ ಅಧ್ಯಕ್ಷ ಚಿದಾನಂದಪ್ಪ, ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಪಾಲ್ಗೊಂಡಿದ್ದರು.ಪಟೇಲ್ ಬಸವರಾಜಪ್ಪ, ಗಜಾಪುರದ ವೀರಯ್ಯ ಗುತ್ತೂರು, ಮಲ್ಲಜ್ಜರ ವಿರೂಪಾಕ್ಷಪ್ಪ, ಎನ್.ಎಚ್.ಪಾಟೀಲ, ವೀರೇಶ ಮೊದಲಾದ ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಶಾಂತಕುಮಾರಿ ಸ್ವಾಗತಿಸಿದರು. ಗುರುಬಸವರಾಜ ಮತ್ತು ಡಾ.ಶ್ವೇತಾ ನಿರೂಪಿಸಿದರು. ಕಾಂತರಾಜ ಮತ್ತು ವೀರೇಶ್ ಸಂಗೀತ ನಡೆಸಿಕೊಟ್ಟರು.
ಬೆಳಗಿನ ಜಾವ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಸಭಾಂಗಣದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು.