ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ ಹಾಗೂ ರಾಜಯೋಗಿ ಡಾ.ಚಂದ್ರಶೇಖರ ಶ್ರೀಗಳವರ ೫೪ನೇ ವರ್ಷದ ಅನುಷ್ಠಾನದ ಸುರ್ವಣ ಮಹೋತ್ಸವ, ರೇವಣಸಿದ್ದೇಶ್ವರ ಮಹಾಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧನ, ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ, ಶಾಂತಿಗಳು ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ, ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ನಡೆಯುವ ದಾರಿಯಲ್ಲಿ ಐನೂರು ರುಪಾಯಿ ನೋಟು ಬಿದ್ದಿದೆ. ಅದು ನನ್ನದು, ನಿನ್ನದು ಎನ್ನದೇ ಸುಮ್ಮನೇ ನಡೆದರೇ ನಾವು ಸುರಕ್ಷಿತರು. ಹಾಗೆಯೇ ಸಂಸಾರದಲ್ಲಿ ಮನೆ, ಮಠ, ಧನ ಕನಕಾದಿ ಮೊದಲಾದವು ನನ್ನದು ತನ್ನದು ಎನ್ನದೇ ಭಗವಂತ ಕರುಣಿಸಿದ ಕೊಡುಗೆ ಎಂದು ನಡೆದರೆ ಸುಖ ಶಾಂತಿ ಬದುಕಿಗೆ ಕಾರಣವಾಗುತ್ತದೆ ಎಂದರು.ನೇತೃತ್ವ ವಹಿಸಿದ ಆದಿಶೇಷ ಹಿರೇಮಠದ ವೀರರಾಜೇಂದ್ರ ಸ್ವಾಮಿಗಳು, ಸಮ್ಮುಖವನ್ನು ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಭಗವಂತ ನೀಡಿದ ಸಂಪತ್ತು ಅಮೂಲ್ಯ. ನೆಲ, ಜಲ, ಬೆಂಕಿ ಗಾಳಿ ಬಯಲು ಕೊಟ್ಟ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಆಗಿದೆ. ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಬದುಕಿ ಬಾಳುವ ಮನುಷ್ಯನಿಗೆ ಉಜ್ವಲ ಬೆಳಕನ್ನು ತೋರುತ್ತವೆ. ಮನುಷ್ಯನಿಗೆ ಮರೆವು-ಅರಿವು ಎರಡೂ ಇದೆ. ಮರೆಯುವುದು ಮನುಷ್ಯನ ಸ್ವಭಾವ. ಮರೆತು ಹೋದುದನ್ನು ನೆನಪು ಮಾಡುವುದೇ ಗುರುವಿನ ಧರ್ಮವಾಗಿದೆ. ಆದಿಶೇಷ ಹಿರೇಮಠದ ಜಾತ್ರಾ ಮಹೋತ್ಸವ ಭಕ್ತರ ಬಾಳಿಗೆ ಬೆಳಕನ್ನು ತೋರಲಿ ಎಂದರು.ಈ ಧರ್ಮ ಸಮಾರಂಭದಲ್ಲಿ ಆಲೂರು ಸಂಸ್ಥಾನ ಹಿರೇಮಠದ ಕೆಂಚವೃಷಬೇಂದ್ರ ಶಿವಾಚಾರ್ಯರು, ನಾಲವಾರದ ಶಿವಯೋಗಿ ಚಂದ್ರಶೇಖರ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಕೆಂಬಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಶಾಸಕ ಅಶೋಕ ಮನಗೂಳಿಯವರ ಧರ್ಮಪತ್ನಿ ನಾಗರತ್ನ ಮನಗೂಳಿ ಮಾತನಾಡಿದರು. ಹುಬ್ಬಳ್ಳಿಯ ಕೃಷಿಕರಾದ ಅರವಿಂದ ಕೇಶ್ವಾಪುರ, ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟಿ, ಕಲಬುರ್ಗಿಯ ಉಪನ್ಯಾಸಕಿ ಜಯಶ್ರೀ ಬಿರಾದಾರ, ಭಾಗ್ಯಜ್ಯೋತಿ ವೃದ್ಧಾಶ್ರಮದ ಗಂಗಮ್ಮ ಗೋರೇಗೊಳ್, ಉಪನ್ಯಾಸಕ ಪ್ರಶಾಂತ ದೇವಣಿ ಹಾಗೂ ಕುಮಠೆ ಪ್ರಗತಿಪರ ರೈತ ಸುರೇಶ ಬಡಿಗೇರ ಅವರಿಗೆ ಆದಿಶೇಷ ಶ್ರೀ ಪ್ರಶಸ್ತಿ ಪ್ರದಾನವನ್ನು ರಂಭಾಪುರಿ ಜಗದ್ಗುರುಗಳು ನೆರವೇರಿಸಿ ಶುಭ ಹಾರೈಸಿದರು.
ಈ ವೇಳೆ ಅಶೋಕ ವಾರದ, ಸತೀಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ನಾಗರಾಜ ಪಾಟೀಲ, ಚಂದ್ರಶೇಖರ ಅರಕೇರಿ, ಬಸವರಾಜ ನಾಗನೂರ, ಮಹೇಶ್ವರಿ ವಾಲಿ, ಎಂ.ಎಂ.ಹಂಗರಗಿ, ಚಂದ್ರಶೇಖರ ನಾಗರಬೆಟ್ಟಿ, ಶಿವಾನಂದ ಬಡಾನೂರ, ಪಂಡಿತ ಯಂಪುರೆ, ಮಲ್ಲನಗೌಡ ಪಾಟೀಲ, ಇಬ್ರಾಹಿಂಪೂರ ಸೇರಿದಂತೆ ತಾಲೂಕಿನ ವಿವಿಧ ಭಾಗದ ಶ್ರೀಮಠದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಇದ್ದರು.
-ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ,
ಜಗದ್ಗುರುಗಳು ಬಾಳೆಹೊನ್ನೂರು ರಂಭಾಪುರಿ ಪೀಠ.