ಶೈಕ್ಷಣಿಕ ಸಾಲಿನಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭ: ಎಚ್.ವಿ.ಅಶ್ವಿನ್ ಕುಮಾರ್

KannadaprabhaNewsNetwork |  
Published : Mar 29, 2025, 12:33 AM IST
28ಕೆಎಂಎನ್ ಡಿ17 | Kannada Prabha

ಸಾರಾಂಶ

ಗ್ರಾಮೀಣದ ಭಾಗದ ಮಕ್ಕಳಿಗೂ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳು ಸಿಗಬೇಕೆಂಬ ಗುರಿ ಇಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಆದ್ಯತೆ ನೀಡಲು ಹಲಗೂರಿನಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಶಾಲೆಯಲ್ಲಿ ಸ್ಫೋರ್ಟ್ಸ್ ಅಕಾಡೆಮಿ ಪ್ರಾರಂಭಿಸುತ್ತಿರುವುದಾಗಿ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್ ತಿಳಿಸಿದರು.

ಚೌಕಿಮಠ ರಸ್ತೆಯ ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್, ವಿದ್ಯಾಧಾರೆ ಪ್ರೀಸ್ಕೂಲ್ ನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಘಟಿಕೋತ್ಸವದಲ್ಲಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಕ್ರೀಡಾರಂಗದಲ್ಲಿ ಹಾಗೂ ವಿದ್ಯಾರಂಗದಲ್ಲಿ ಅವಕಾಶಗಳು ಕಡಿಮೆ. ಆದರೆ, ನಗರ ಪ್ರದೇಶಗಳಲ್ಲಿ ಎಲ್ಲಾ ಸೌಲಭ್ಯಗಳು ಸಿಗುವುದರಿಂದ ಅಲ್ಲಿನ ಮಕ್ಕಳಿಗೆ ಅವಕಾಶ ಹೆಚ್ಚಿರುತ್ತದೆ ಎಂದರು.

ಗ್ರಾಮೀಣದ ಭಾಗದ ಮಕ್ಕಳಿಗೂ ಎಲ್ಲಾ ಕ್ಷೇತ್ರದಲ್ಲೂ ಅವಕಾಶಗಳು ಸಿಗಬೇಕೆಂಬ ಗುರಿ ಇಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಆದ್ಯತೆ ನೀಡಲು ಹಲಗೂರಿನಲ್ಲಿ ಸ್ಪೋರ್ಟ್ಸ್ ಅಕಾಡೆಮಿ ಪ್ರಾರಂಭಿಸುತ್ತಿರುವುದಾಗಿ ತಿಳಿಸಿದರು.

ಮಂಡ್ಯ ರಾಯಲ್ ಚೆಸ್ ಅಕಾಡೆಮಿ ವೃತ್ತಿಪರ ಚೆಸ್ ತರಬೇತುಗಾರ ಚೇತನ್ ಮಾತನಾಡಿ, ನಾನು ಮೊದಲು ಚದುರಂಗ ಆಟವನ್ನು ಹವ್ಯಾಸವಾಗಿ ಆಡುತ್ತಿದ್ದೆ. ನಂತರ ಅದನ್ನು ವೃತ್ತಿಯಾಗಿ ಜೀವನದಲ್ಲಿ ಅಳವಡಿಸಿಕೊಂಡು ಬೇರೆಯವರಿಗೆ ಅದನ್ನು ಕಲಿಸುವ ತರಗತಿಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಚದುರಂಗ ಒಂದು ಬೌದ್ಧಿಕ ಶಕ್ತಿಗೆ ಸವಾಲನ್ನು ನೀಡುವ ಕ್ರೀಡೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮೊದಲಿಗೆ ಜೀವನದಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು ಕಲಿಯಲು ಸಹಾಯ ಮಾಡುತ್ತದೆ. 4ನೇ ವಯಸ್ಸಿನಿಂದಲೇ ಮಕ್ಕಳಿಗೆ ಚೆಸ್ ಕಲಿಸುವುದರಿಂದ ಏಕಾಗ್ರತೆ, ಸ್ಮರಣಶಕ್ತಿ, ಗ್ರಹಣ ಶಕ್ತಿ, ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾದ ಸಾಮರ್ಥ್ಯ ಬರುತ್ತದೆ ಎಂದು ತಿಳಿಸಿದರು.

ಸಂಸ್ಥೆ ಮೇಲ್ವಿಚಾರಕಿ ಎಚ್‌.ವಿ.ಶ್ವೇತಕುಮಾರಿ ಮಾತನಾಡಿ, ನಾವು ಯಾವುದೇ ಆಟವಾಡಬೇಕಾದರೆ ಏಕಾಗ್ರತೆ ಮುಖ್ಯ. ಇದರಿಂದ ಮಾತ್ರ ಕ್ರೀಡೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯ. ವ್ಯಾಸಂಗದ ಜೊತೆಗೆ ಕ್ರೀಡೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಪ್ರೋತ್ಸಾಹಿಸಬೇಕು. ಇದರಿಂದ ದೇಹ ದೃಢವಾಗುವುದರ ಜೊತೆಗೆ ಜ್ಞಾನಾರ್ಜನೆಗೂ ಸಹಕಾರಿಯಾಗಲಿದೆ ಎಂದರು.

ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸೌಮ್ಯಾ, ಶ್ರುತಿ, ಮಧು, ಲಕ್ಷ್ಮೀ, ಮಾಲಾ , ಶರತ್ ಸೇರಿದಂತೆ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ