ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಲಕ್ಯಾ ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢಶಾಲೆ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಚಿಕ್ಕಮಗಳೂರು ಎಫ್ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕ್ರೀಡೆಗಳು ಜೀವನೋತ್ಸಾಹದ ಜತೆಗೆ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಹೆಚ್ಚು ಸಾಮರ್ಥ್ಯ ಪಡೆಯಲು ಸಾಧ್ಯವಾಗುತ್ತದೆ. ಸೋಲು-ಗೆಲುವು ಸಹಜ, ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯ ಎಂದರು.ತೀರ್ಪುಗಾರರು ತಾರತಮ್ಯ ಇಲ್ಲದಂತೆ ನ್ಯಾಯ ಸಮ್ಮತವಾದ ನಿರ್ಣಯ ಕೈಗೊಳ್ಳಲಿದ್ದಾರೆ. ಜೀವನದಲ್ಲಿ ಸಾಧನೆ ಮಾಡಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ ಉತ್ತಮ ಸಾಮರ್ಥ್ಯ ಪಡೆಯಲು ಕ್ರೀಡೆಗಳಲ್ಲಿ ಭಾಗವಹಿಸಿ ಜೀವನೋತ್ಸಾಹ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಂದ ನಡೆಯುತ್ತಿರುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗಿಯಾಗಿದೆ ಎಂದ ಅವರು, ಗ್ರಾಮೀಣ ಭಾಗದ ಕ್ರೀಡೆಗಳು ನಶಿಸುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳು ಇಂದಿಗೂ ದೇಹಕ್ಕೆ ಶಕ್ತಿ ನೀಡುವಂತಹ ಕಬ್ಬಡಿ ಕ್ರೀಡೆ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕ್ರೀಡೆಗಳು ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ. ಸ್ಪರ್ಧೆಗಳಲ್ಲಿ ಪ್ರಯತ್ನಗಳಿರಬೇಕು. ಗೆದ್ದರೆ ಖುಷಿಯಿರಲಿ, ಸೋತರೆ ಮತ್ತೊಮ್ಮೆ ಪ್ರಯತ್ನಿಸುವ ಛಲವು ಇದ್ದಲ್ಲಿ, ಭವಿಷ್ಯದಲ್ಲಿ ಎತ್ತರಕ್ಕೆ ಹೋಗಲು ಸಾಧ್ಯ ಎಂದರು.