ಕನ್ನಡಪ್ರಭ ವಾರ್ತೆ ಕೋಲಾರ ಕ್ರೀಡಾ ಚಟುವಟಿಕೆಗಳ ಜತೆಗೆ ಅಭ್ಯಾಸವು ನಿರಂತರವಾಗಿ ಮುಂದುವರೆಸಿದಾಗ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವು ಸಧೃಡವಾಗಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ೨೦೨೪-೨೫ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ ೧೪-೧೭ ವರ್ಷ ವಯೋಮಿತಿಯೊಳಗಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಲಿಗೆ ಹಿಂಜರಿಯದಿರಿಈ ಕ್ರೀಡಾಕೂಟವನ್ನು ನೋಡುತ್ತಿದ್ದರೆ ನನ್ನ ಬಾಲ್ಯದ ವಿದ್ಯಾರ್ಥಿ ದೆಸೆಯಲ್ಲಿನ ಕ್ರೀಡಾ ಚಟುವಟಿಕೆಗಳು ನನೆಪಿಗೆ ಬರುತ್ತವೆ. ಕ್ರೀಡೆಗಳಲ್ಲಿ ಸೋಲು ಗೆಲವುಗಳು ಸಹಜವಾದ ಪ್ರಕ್ರಿಯೆಗಳು. ಸೋಲುಂಟಾದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಹಿಂಜರಿಯುವಂತಾಗಬಾರದು ಇಂದಿನ ಸೋಲು ಮುಂದಿನ ಗೆಲುವಿನ ಸೋಪಾನ ಎಂದು ತಿಳಿದು ಮುಂದುವರೆಯಬೇಕೆಂದು ಕರೆ ನೀಡಿದರು.ಕ್ರೀಡೆಗಳಲ್ಲಿ ಸ್ಫೂರ್ತಿ ಮತ್ತು ಧೈರ್ಯದಿಂದ ಯಾವುದೇ ಗೊಂದಲಕ್ಕೆ ಒಳಗಾಗದೆ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತಾಗಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಆರ್.ಗೀತಾ ಮಾತನಾಡಿ, ಪ್ರಸಕ್ತ ಸಾಲಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಬಾಲಕಿಯರ ಕ್ರೀಡಾಕೂಟದ ಅವಕಾಶ ಸದ್ಬಳಿಸಿಕೊಂಡು ನಿಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಬೇಕು, ವಿದ್ಯಾರ್ಥಿಗಳಿಗೆ ಶಿಕ್ಷಣವು ಎಷ್ಟು ಮುಖ್ಯವೋ ಕ್ರೀಡೆಗಳು ಸಹ ಅಷ್ಟೇ ಮುಖ್ಯ ಹಾಗಾಗಿ ಕ್ರೀಡೆಗಳಿಂದ ಮಾನಸಿಕ ಒತ್ತಡಗಳಿಂದ ಮುಕ್ತರಾಗಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಸಧೃಡವಾಗಿ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿದೆ ಎಂದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಪ್ಪಯ್ಯಗೌಡ, ಡಿಡಿಪಿಐ ಕೃಷ್ಣಮೂತಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ಮುಖಂಡರಾದ ಎಂ.ಮಂಜುನಾಥ್, ಹೆಚ್.ಶಿವಕುಮಾರ್, ವಿ.ಮುರಳಿಮೋಹನ್, ವಿ,ವಿ.ರಾಮಕೃಷ್ಣ, ಆಂಜನೇಯ, ಕೆ.ನಾರಾಯಣರೆಡ್ಡಿ, ಆರ್.ನಾಗರಾಜ್, ಸಂತೋಷ ಕುಮಾರ್, ಮಾರ್ಕೋಂಡಪ್ಪ ಇದ್ದರು.