ಮನುಷ್ಯನ ಉತ್ಸಾಹಕ್ಕೆ, ಉಲ್ಲಾಸಕ್ಕೆ ಕ್ರೀಡೆ ಅವಶ್ಯ

KannadaprabhaNewsNetwork | Published : Nov 25, 2024 1:00 AM

ಸಾರಾಂಶ

ತುಮಕೂರು ವಿಶ್ವವಿದ್ಯಾನಿಲಯ ಮುಂಭಾಗದಿಂದ ಆರಂಭವಾದ ಕ್ರೀಡಾಜ್ಯೋತಿ ಭವ್ಯ ಮೆರವಣಿಗೆಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು ತುಮಕೂರು ವಿಶ್ವವಿದ್ಯಾನಿಲಯ ಮುಂಭಾಗದಿಂದ ಆರಂಭವಾದ ಕ್ರೀಡಾಜ್ಯೋತಿ ಭವ್ಯ ಮೆರವಣಿಗೆಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪತ್ರಕರ್ತರು ಒತ್ತಡದಿಂದ ಮುಕ್ತರಾಗಲು ಕ್ರೀಡಾಕೂಟಗಳು ಆಯೋಜನೆ ಅವಶ್ಯಕ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಕ್ರೀಡಾಜ್ಯೋತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಮಾತನಾಡಿ, ಪತ್ರಕರ್ತರು ದೈಹಿಕ ಮತ್ತು ಮಾನಸಿಕವಾಗಿ ಸದೃಢರರಾಗಿರಬೇಕು. ಹಾಗಾಗಿ ಇಂತಹ ಕ್ರೀಡಾಕೂಟಗಳನ್ನು ಆಗಾಗ್ಗೆ ಆಯೋಜನೆ ಮಾಡುವುದು ಒಳಿತು ಎಂದು ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಿಂದ ಹೊರಟ ಕ್ರೀಡಾಜ್ಯೋತಿ ಮೆರವಣಿಗೆಯು ಬಿ.ಎಚ್. ರಸ್ತೆ ಮುಖೇನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಿಂದ ಡಾ. ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಸಾಗಿ ಕ್ರೀಡಾಕೂಟ ಏರ್ಪಡಿಸಿದ್ದ ಮಹಾತ್ಮಗಾಂಧಿ ಕ್ರೀಡಾಂಗಣ ತಲುಪಿತು. ಮೆರವಣಿಗೆ ಸಾಗಿದ ದಾರಿಯುದ್ಧಕ್ಕೂ ನಡೆದ ವೀರಗಾಸೆ ಕುಣಿತ, ವಿವಿಧ ಕಾಲೇಜುಗಳ ಎನ್‌ಸಿಸಿ ವಿದ್ಯಾರ್ಥಿಗಳ ಪೆರೇಡ್ ನೋಡುಗರ ಗಮನ ಸೆಳೆಯಿತು.

ಕಬಡ್ಡಿ ಟೂರ್ನಿಗೆ ಸಚಿವ ಸೋಮಣ್ಣ ಚಾಲನೆನಂತರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಕ್ರೀಡೆ ಮನುಷ್ಯನ ಉತ್ಸಾಹಕ್ಕೆ, ಉಲ್ಲಾಸಕ್ಕೆ ಹಾಗೂ ನೆಮ್ಮದಿಗೆ ಅತ್ಯುತ್ತಮವಾದ ಸಾಧನ. ನಮ್ಮಲ್ಲಿರುವ ನೋವನ್ನು ಶಮನ ಮಾಡಲು ಕ್ರೀಡೆ ಸಹಕಾರಿ ಎಂದರು.ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಮನಸ್ಸಿನ ನೆಮ್ಮದಿ ಹಾಗೂ ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಒಳಿತು ಎಂದರು.ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿ ಪಾಲ್ಗೊಂಡಿರುವುದು ಸಂತೋಷದಾಯಕ. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಕ್ರೀಡೆ ಪ್ರತಿಯೊಬ್ಬರ ಜೀವನದಲ್ಲಿ ಅತಿ ಮುಖ್ಯ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಕ್ರೀಡೂಕೂಟದಲ್ಲಿ ಪಾಲ್ಗೊಂಡಿರುವುದು ತುಂಬಾ ಸಂತಸದ ಸಂಗತಿ ಎಂದರು.ಸದ್ಯದಲ್ಲೇ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸಹ ದೊರೆಯಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಚಿದಾನಂದ ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, ಐಎಫ್‌ಡಬ್ಲುಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕೆಯುಡಬ್ಲುಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ, ಟಿ.ಎನ್. ಮಧುಕರ್ ಮತ್ತಿತರರು ಭಾಗವಹಿಸಿದ್ದರು.

Share this article