ಕನ್ನಡಪ್ರಭ ವಾರ್ತೆ ನಾಲತವಾಡ
ಸಮೀಪದ ಬಿಜ್ಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆರೋಗ್ಯವೇ ಮಹಾಭಾಗ್ಯ ಎಂಬ ನುಡಿಗಟ್ಟಿಗೆ ತಕ್ಕಂತೆ ಕ್ರೀಡೆಗಳು ಜೀವನದಲ್ಲಿ ಸಂತೋಷ, ಚೈತನ್ಯ ಹಾಗೂ ಉತ್ಸಾಹ ತುಂಬುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಬಿಜ್ಜೂರ ಶಾಲೆ ತಾಲೂಕಿನಲ್ಲಿ ಅತ್ಯಂತ ಸುಂದರ ಶಾಲೆಯಾಗಿ ಹೊರಹೊಮ್ಮಿದೆ. ಮುಳಗಡೆ ಭಾಗದ ಬಡ ಮಕ್ಕಳಿಗೆ ಸಹಾಯವಾಗಲು ಬಿಜ್ಜೂರ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾಗಬೇಕು. ನಾನು ಕೂಡ ಶಾಸಕರಿಗೆ ಮನವಿ ಮಾಡುವೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ಮಕ್ಕಳು ಮೊಬೈಲ್ ಗೇಮ್‌ಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ, ಆದರೆ ಅದು ನಿಜವಾದ ಕ್ರೀಡೆ ಅಲ್ಲ. ನಿಜವಾದ ಕ್ರೀಡೆ ಎಂದರೆ ದೇಹವನ್ನು ಮೈದಾನದಲ್ಲಿ ಚಲನೆಗೊಳಿಸಿ, ಬೆವರೊರೆಸಿಕೊಂಡು ಮೈಮರೆಯುವ ಆಟ. ಕ್ರೀಡೆ ಮಕ್ಕಳು ದೈಹಿಕವಾಗಿ ಬಲಿಷ್ಠರಾಗಲು, ಮಾನಸಿಕವಾಗಿ ಸದೃಢರಾಗಲು ಮತ್ತು ಶಿಸ್ತಿನಿಂದ ಬದುಕಲು ಮಾರ್ಗದರ್ಶಕವಾಗುತ್ತದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಮೊಬೈಲ್ ಗೇಮ್‌ಗಳ ಬದಲು ಮೈದಾನದಲ್ಲಿ ಆಡುವ ಆಟಗಳಿಗೆ ಉತ್ತೇಜನ ನೀಡಬೇಕು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸುವಂತೆ ಪ್ರೋತ್ಸಾಹಿಸಬೇಕು. ಮಕ್ಕಳ ಭವಿಷ್ಯ ಉತ್ತಮವಾಗಬೇಕೆಂದರೆ ಕ್ರೀಡೆಗೆ ತಕ್ಕ ಮಟ್ಟಿನ ಮಹತ್ವ ನೀಡುವುದು ಅವಶ್ಯ ಎಂದರು.ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ ಮಾತನಾಡಿದರು. ಎಸ್.ಪಿ.ಔದಕ್ಕನವರ ಪ್ರಾರ್ಥನೆ ಸಲ್ಲಿಸಿದರು. ಪಪಂ ಸದಸ್ಯ ಪೃಥ್ವಿರಾಜ ನಾಡಗೌಡ ಕ್ರೀಡಾ ದ್ವಜಾರೋಹಣ ಮಾಡಿದರು. ತನುಜಾ ಹಾಗೂ ತಂಡ ಸ್ವಾಗತ ಗೀತೆ ಹಾಡಿದರು.