ಕನ್ನಡಪ್ರಭ ವಾರ್ತೆ ಜಮಖಂಡಿ
ಯುವಕ ತನ್ನನ್ನು ಹೊಡೆಯದೇ, ಬಿಟ್ಟುಬಿಡುವಂತೆ ಅಂಗಲಾಚಿದರೂ ನಾಲ್ವರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹುಲ್ಯಾಳ ಗ್ರಾಮದ ಶಂಭು ಪುಂಡಲೀಕ ಕೋರಿ (25) ಹಲ್ಲೆಗೊಳಗಾದ ಯುವಕ. ಕಂಕಣವಾಡಿ ಗ್ರಾಮದ ನರಸಿಂಹ ಬಸಪ್ಪ ಅತ್ತೆಪ್ಪನವರ, ಶ್ರೀಶೈಲ ಅತ್ತೆಪ್ಪನವರ, ಮಲ್ಲಪ್ಪ ಅತ್ತೆಪ್ಪನವರ, ಬಸು ಅತ್ತೆಪ್ಪನವರ ಹಲ್ಲೆ ನಡೆಸಿದವರು ಎಂದು ಹೇಳಲಾಗುತ್ತಿದೆ.
ಘಟನೆಯ ಹಿನ್ನೆಲೆ: ಹಲ್ಲೆಗೊಳಗಾದ ಶಂಭು ಎರಡು ವರ್ಷಗಳ ಹಿಂದೆ ಕಂಕಣವಾಡಿ ಗ್ರಾಮಕ್ಕೆ ಕಬ್ಬು ಕಡಿಯಲೆಂದು ಕೂಲಿ ಕೆಲಸಕ್ಕೆ ಹೋಗಿದ್ದ. ಆಗಿನಿಂದ ಕಂಕಣವಾಡಿ ಗ್ರಾಮದ ಯುವತಿಯ ಹಿಂದೆ ಬಿದ್ದು ಪೀಡಿಸುತ್ತಿದ್ದ ಎಂದು ಆರೋಪಿಸಿ ಯುವತಿಯ ಸಂಬಂಧಿಕರು ಭಾನುವಾರ ಜಮಖಂಡಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಶಂಭುನಿಗೆ ಕರೆ ಮಾಡಿದ ಆರೋಪಿಗಳು ಏಕೆ ಪೀಡಿಸುತ್ತಿದ್ದೀಯಾ ಎಂದು ಪ್ರಶ್ನಿಸಿ ಬೆದರಿಕೆ ಹಾಕಿದ್ದು, ನಾನು ಅಂತಹ ಕೆಲಸ ಮಾಡಿಲ್ಲ ಎಂದು ಶಂಭು ಉತ್ತರ ನೀಡಿದ್ದಾನೆ.ನಮ್ಮ ಬಳಿ ದಾಖಲೆ ಇದ್ದು, ಗ್ರಾಮಕ್ಕೆ ಬರುವಂತೆ ಕರೆದಿದ್ದಾರೆ. ನಾನೀಗ ಜಮಖಂಡಿಯಲ್ಲಿ ಇದ್ದೇನೆಂದು ಶಂಭು ತಿಳಿಸಿದ್ದಾನೆ. ಕೂಡಲೇ ಆರೋಪಿಗಳು ಜಮಖಂಡಿಗೇ ಬಂದು ಏಕಾಏಕಿ ಮಾರಕಾಸ್ತ್ರಗಳಿಂದ ಥಳಿಸಲಾರಂಭಿಸಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.