ಚಿಕ್ಕಮಗಳೂರು ಗೌಡ್ತಿಯರ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಶ್ರೀಗಳಿಂದ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಾರೀರಿಕ ಶಕ್ತಿ ಸದೃಢಗೊಳ್ಳಲು ಕ್ರೀಡಾಕೂಟಗಳು ಸಹಕಾರಿ. ಹಾಗಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಪೂಜ್ಯ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.
ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ಗೌಡ್ತಿಯರ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಜಿಲ್ಲೆಯ ಹಾಗೂ ರಾಜ್ಯದ ಒಕ್ಕಲಿಗ ಜನಾಂಗದ ಹೆಣ್ಣು ಮಕ್ಕಳು ಒಂದೆಡೆ ಸೇರಿ ಸಂಘಟನಾತ್ಮಕವಾಗಿ ಭಾಗವಹಿಸಲು ರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಶ್ಲಾಘಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರುತಿಸುವಂತೆ ಕ್ರೀಡಾ ಪಟುಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರೂ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಹಾರೈಸಿದರು.
ಗೌಡ್ತಿಯರು ತಮ್ಮ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಶಾರೀರಿಕವಾಗಿ ಎಲ್ಲರೂ ಸದೃಢರಾಗಿರುತ್ತಾರೆ. ಇಂದು ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ಸದೃಢರಾಗುತ್ತಾರೆ ಎಂದು ತಿಳಿಸಿದರು.ಶಾರೀರಿಕ ಸದೃಢತೆ ಜೊತೆಗೆ ಮಾನಸಿಕ ಸ್ಥೈರ್ಯ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಒಕ್ಕಲಿಗರು ಶಾರೀರಿಕವಾಗಿ ಸದೃಢರಾಗಿರುತ್ತಾರೆ. ಮಾನಸಿಕವಾಗಿ ಬಳಲುತ್ತಿರುತ್ತಾರೆ. ಕಷ್ಟಗಳು ಎದುರಾದರೆ ಸಮಸ್ಯೆ ಬಂದ ಸಂದರ್ಭದಲ್ಲಿ ಸಮಗ್ರವಾಗಿ ಎದುರಿಸುವ ಶಕ್ತಿ ಬೆಳೆಸಿ ಕೊಳ್ಳಬೇಕೆಂದು ಕರೆ ನೀಡಿದರು.
ಹಿಂದೆ ಬಾಲಗಂಗಾಧರನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಕುವೆಂಪು ಕಲಾಮಂದಿರದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಮೂಲಕ ಮಾನಸಿಕ ಸಮತೋಲನ ಕಾಯ್ದುಕೊಳ್ಳಲಾಯಿತು. ಅದೇ ರೀತಿ ಈಗ ಗುರುಗಳು ಹೇಳುವ ಆಶೀರ್ವಚನ ಕೇಳಿದಾಗ ವ್ಯಕ್ತಿಯ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಹೇಳಿದರು.ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕೆ ವಯಸ್ಸಿನ ಅಂತರವಿಲ್ಲ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ. ಇಂತಹ ಕ್ರೀಡಾಕೂಟಗಳು ಮುಂದೆ ದೊಡ್ಡಮಟ್ಟದಲ್ಲಿ ಆಯೋಜನೆಗೊಳ್ಳುವ ಮೂಲಕ ಕ್ರೀಡಾಸಕ್ತಿಯನ್ನು ಜನಾಂಗದಲ್ಲಿ ಹೆಚ್ಚಿಸಲು ಸಹಕಾರಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಕೆಲವು ಅಡೆತಡೆ ಸಮಸ್ಯೆಗಳನ್ನು ಮೀರಿ ಈ ಕ್ರೀಡಾಕೂಟ ಆಯೋಜನೆ ಮಾಡಿರುವವರ ಪರಿಶ್ರಮವನ್ನು ಶ್ಲಾಘಿಸಿದ ಅವರು, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸುವ ಭರವಸೆ ನೀಡಿದರು.ಇಂದು ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಬುನಾದಿ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಅತಿ ದೊಡ್ಡಮಟ್ಟದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಪಟುಗಳು ಪ್ರಜ್ವಲಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಟೈಗರ್ಸ್ ಕ್ಲಬ್ ಉಪಾಧ್ಯಕ್ಷ ಹಾಗೂ ಸಿಜಿಪಿಎಲ್ ಕ್ರೀಡಾಕೂಟದ ಅಧ್ಯಕ್ಷರೂ ಆದ ಸಿ.ಟಿ ರೇವತಿ ಧರ್ಮಪಾಲ್ ಮಾತನಾಡಿ, ಗೌಡ್ತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಮೊದಲ ಬಾರಿಗೆ ಚಿಕ್ಕಮಗಳೂರಿನಲ್ಲಿ ಆಯೋಜನೆ ಮಾಡಿದ್ದು, ಇಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಜಿಲ್ಲೆಯಿಂದ ರಾಜ್ಯಮಟ್ಟದವರೆಗೆ ಹೆಸರು ಗಳಿಸುವಂತೆ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.ಕಾರ್ಯಕ್ರಮದಲ್ಲಿ ಡಾ. ವರ್ಷಾ ಅಭಿಷೇಕ್, ಡಾ. ಜೆ.ಪಿ. ಕೃಷ್ಣೇಗೌಡ, ಡಾ. ಜ್ಯೋತಿ ಕೃಷ್ಣ, ಟಿ.ಡಿ. ಮಲ್ಲೇಶ್, ಪಲ್ಲವಿ ಸಿ.ಟಿ.ರವಿ, ಉತ್ತಮ್ ಹುಲಿಕೆರೆ, ನಿರ್ಮಲ ಮಂಚೇಗೌಡ, ಕವಿತಾ ಶೇಖರ್, ಕೃಷ್ಣವೇಣಿ ರಮೇಶ್, ಶೋಭಾ ರಾಜೇಶ್, ಧರಣಿ ನಾಗೇಶ್, ಡಾ. ಸಿ.ಟಿ. ಜಯದೇವ, ಡಾ. ಸಿ.ಕೆ.ಸುಬ್ರಾಯ, ಪ್ರೀತಿ ಯೋಗೀಶ್, ಜೆಸೆಂತ ಅನಿಲ್‌ಕುಮಾರ್, ಸುಮಿತ್ರ ನಾಗಪ್ಪಗೌಡ, ಅಮಿತಾ ವಿಜಯೇಂದ್ರ ಉಪಸ್ಥಿತರಿದ್ದರು. 28 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ಚಿಕ್ಕಮಗಳೂರು ಗೌಡ್ತಿಯರ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಟಿ. ರಾಜಶೇಖರ್, ಸಿ.ಟಿ. ರೇವತಿ ಧರ್ಮಪಾಲ್, ಡಾ. ಸಿ.ಕೆ. ಸುಬ್ರಾಯ, ಡಾ. ಸಿ.ಟಿ. ಜಯದೇವ್, ಡಾ. ಜೆ.ಪಿ.ಕೃಷ್ಣೇಗೌಡ, ಡಾ. ವರ್ಷಾ ಅಭಿಷೇಕ್, ಕವಿತಾ ಶೇಖರ್ ಇದ್ದರು.