ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕರ್ಕೇಶ್ವರ ಕೈಮರದ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಹಾಗೂ ಗೆಳೆಯರ ಬಳಗ ಶರನ್ನವರಾತ್ರಿ ಹಾಗೂ ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ. ಇದರಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯವಿದೆ. ಊರಿನ ಯುವಕರು, ಪ್ರಜ್ಞಾವಂತ ನಾಗರಿಕರು ಒಗ್ಗೂಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪರಸ್ಪರ ಸ್ನೇಹ, ಸಾಮರಸ್ಯವೂ ಬೆಳೆಯಲಿದೆ. ಈ ನಿಟ್ಟಿನಲ್ಲಿ ಕರ್ಕೇಶ್ವರ ಕೈಮರದ ಗ್ರಾಮಸ್ಥರು ಶರನ್ನವರಾತ್ರಿಗೆ ಆಯೋಜಿಸಿರುವ ಕ್ರೀಡಾಕೂಟ ಉತ್ತಮ ಎಂದರು.
ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಸ್ಥರು ಹಲವಾರು ಮನವಿ ಈ ಸಂದರ್ಭದಲ್ಲಿ ತನಗೆ ಸಲ್ಲಿಸಿರುವುದು ಸಮಯೋಚಿತ. ರಸ್ತೆ ಅಭಿವೃದ್ಧಿಗೆಗ್ರಾಮಸ್ಥರು ಮನವಿ ನೀಡಿದ್ದಾರೆ. ಕೇಂದ್ರ ಸರ್ಕಾರ ಸಂಸದರಿಗೆ ನಿಗದಿತ ಅನುದಾನ ನೀಡುತ್ತಿದ್ದು, ಇದರಿಂದ ಪೂರ್ಣ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ. ಬೇರೆ ಬೇರೆ ಯೋಜನೆಗಳ ಮೂಲಕ ರಸ್ತೆ ಅಭಿವೃದ್ಧಿ ಕಾಮ ಗಾರಿ ಕೈಗೊಳ್ಳುವ ಅವಕಾಶವಿದೆ. ಈ ಬಗ್ಗೆ ಗಮನಹರಿಸಿ ಆದ್ಯತೆ ಮೇರೆಗೆ ಕೆಲಸ ಮಾಡಲಾಗುವುದು ಎಂದರು.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಕುರಿತು ಸಾಕಷ್ಟು ದೂರುಗಳಿದ್ದು, ಹಲವು ಗ್ರಾಮ ಗಳಿಗೆ ಈಗಾಗಲೇ ಪೈಪ್ ಲೈನ್ ಇದ್ದರೂ ನೀರು ಎಲ್ಲಿಂದ ಸಂಪರ್ಕ ಕಲ್ಪಿಸಬೇಕು ಎಂಬುದು ಗುತ್ತಿಗೆದಾರರಿಗೆ, ಎಂಜಿನಿಯರ್ ಗಳಿಗೆ ಗೊತ್ತಿಲ್ಲ. ಇದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಕರ್ಕೇಶ್ವರ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ, ರುದ್ರಭೂಮಿ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಂಸದರಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಬಾಳೆಹೊನ್ನೂರಲ್ಲಿ ಶರನ್ನವರಾತ್ರಿ ಹಾಗೂ ದಸರಾ ಅಂಗವಾಗಿ ಯೋಜಿಸಿದ್ದ ಕ್ರೀಡಾಕೂಟದಲ್ಲಿ ಸಂಸದ ಕೋಟಾ ಶ್ರೀನಿವಾಸಪೂಜಾರಿ ಮಾತನಾಡಿದರು. ನಾಗರಾಜ್ ವಾಲ್ಮೀಕಿ, ಎಸ್.ಪ್ರಕಾಶ್, ಡಿ.ಎನ್.ಜೀವರಾಜ್, ರಾಜೇಶ್ ಕೇಶವತ್ತಿ ಇದ್ದರು.