ಕ್ರೀಡೆಗಳು ಸದೃಢ ಆರೋಗ್ಯ ಹೊಂದಲು ಸಹಕಾರಿ

KannadaprabhaNewsNetwork | Published : Nov 29, 2024 1:05 AM

ಸಾರಾಂಶ

ಕ್ರೀಡೆ ಹಾಗೂ ದೈಹಿಕ ಚಟವಟಿಕೆಗಳಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಮಟ್ಟ ಅಭಿವೃದ್ಧಿಯಾಗುತ್ತದೆ

ಗದಗ: ಸದೃಢ ಆರೋಗ್ಯವಿದ್ದರೆ ಸದೃಢವಾದ ಮನಸ್ಸು ಇರುತ್ತದೆ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮೆದುಳು ಅಭಿವೃದ್ಧಿ ಹೊಂದುತ್ತದೆ. ಕ್ರೀಡೆಗಳು ಸದೃಢ ಆರೋಗ್ಯ ಹೊಂದಲು ಸಹಕಾರಿಯಾಗುವುದಲ್ಲದೇ ಜೀವನದಲ್ಲಿ ಯಶಸ್ಸು ಗಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ಹಾಗೂ ದೈಹಿಕ ಚಟವಟಿಕೆಗಳಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮವಿಶ್ವಾಸ ಮಟ್ಟ ಅಭಿವೃದ್ಧಿಯಾಗುತ್ತದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇತ್ತೀಚೆಗೆ ಶಾಲಾ-ಕಾಲೇಜುಗಳಲ್ಲಿ ವ್ಯಾಯಾಮ, ಯೋಗಾಸನ ಪಠ್ಯಕ್ರಮವನ್ನಾಗಿ ರೂಢಿಸಿಕೊಳ್ಳಲಾಗುತ್ತಿದೆ ಎಂದರು.

ಸಾಮಾಜಿಕ ಮೌಲ್ಯ ಕುಸಿಯುತ್ತಿರುವ ಈ ಸಮಯದಲ್ಲಿ ಪೊಲೀಸ್ ಇಲಾಖೆಯ ಕೆಲಸದ ಒತ್ತಡದಿಂದ ಕೂಡಿರುತ್ತದೆ ಮತ್ತು ಕಠಿಣವಾಗಿರುತ್ತದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರೀಡೆಗಳ ಜತೆಗೆ ದೈಹಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಳ್ಳುವ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದರು.

ಪೊಲೀಸರು ಇತರೆ ಪ್ರಕರಣ ತನಿಖೆ ಮಾಡಿ ನ್ಯಾಯಾಲಯದಲ್ಲಿ ಸಾಕ್ಷದಾರ ಸರಿಯಾಗಿ ಸಾಕ್ಷ್ಯ ಹೇಳದ ಕಾರಣ ಪ್ರಕರಣ ಬಿದ್ದು ಹೋಗುವ ಸಂದರ್ಭವಿರುತ್ತದೆ. ಅಂತಹ ಸಮಯದಲ್ಲಿ ಪ್ರಕರಣಗಳನ್ನು ಕೂಡ ಕ್ರೀಡಾಮನೋಭಾವನೆಯಿಂದ ಸ್ವೀಕರಿಸಬೇಕು ಎಂದರು.

ಪ್ರತಿಯೊಬ್ಬ ನಾಗರಿಕರು ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ದೈಹಿಕ ಚಟುವಟಿಕೆಗಳು ಬಹಳ ಮುಖ್ಯವಾಗಿದೆ. ಕ್ರೀಡೆಗಳ ಮಹತ್ವ ಮನಗಂಡು 2012 ರಿಂದ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಿ ಎಂದು ಶುಭ ಹಾರೈಸಿದರು.

ಗದಗ ಶಹರ ಹಾಗೂ ವಿಶೇಷ ಘಟಕ, ಗದಗ ಗ್ರಾಮೀಣ ಹಾಗೂ ಮುಳಗುಂದ, ರೋಣ ವೃತ್ತ, ಡಿಎಆರ್ ವೃತ್ತ, ಶಿರಹಟ್ಟಿ ವೃತ್ತ, ಬೆಟಗೇರಿ ವೃತ್ತ, ನರಗುಂದ-ಮುಂಡರಗಿ ವೃತ್ತ ಸೇರಿ 7 ತಂಡಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಡಿವೈಎಸ್ಪಿ ವಿದ್ಯಾನಂದ ನಾಯಕ, ಪ್ರಭುಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ವಿವಿಧ ವೃತ್ತದ ಸಿಪಿಐ, ಪಿಎಸ್‌ಐ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಶಂಕರಗೌಡ ಚೌಧರಿ ನಿರೂಪಿಸಿದರು.

Share this article