ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

KannadaprabhaNewsNetwork |  
Published : Nov 16, 2025, 02:30 AM IST
15ಕೆಪಿಎಲ್21 ಕೊಪ್ಪಳ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನ. 15 ರಿಂದ 17ರ ವರೆಗೆ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025ರ ಕಾರ್ಯಕ್ರಮ | Kannada Prabha

ಸಾರಾಂಶ

ಕರ್ನಾಟಕ ಪೊಲೀಸ್ ಎಂದರೆ ದಕ್ಷತೆ, ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಸರಾಗಿದ್ದು, ಈ ದಿಶೆಯಲ್ಲಿ ಪೊಲೀಸರು ನಿರಂತರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊಪ್ಪಳ: ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆಗಳು ಸಹಕಾರಿಯಾಗಲಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025ರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ಪೊಲೀಸ್ ಎಂದರೆ ದಕ್ಷತೆ, ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗೆ ಹೆಸರಾಗಿದ್ದು, ಈ ದಿಶೆಯಲ್ಲಿ ಪೊಲೀಸರು ನಿರಂತರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ವರ್ಷಪೂರ್ತಿ ಶಿಷ್ಟಾಚಾರ ಪಾಲನೆ, ಸಾರ್ವಜನಿಕರ ರಕ್ಷಣೆ, ಸೂಕ್ತ ಬಂದೋಬಸ್ತ್ ಮತ್ತು ಅಪರಾಧ ತನಿಖೆಯಂತಹ ಸಂದರ್ಭಗಳಲ್ಲಿ ಒತ್ತಡದಿಂದ ಕೆಲಸ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಪೊಲೀಸರಿಗೆ ಮಾನಸಿಕ ಒತ್ತಡದಿಂದ ಹೊರಬರಲು ಇಂತಹ ಕ್ರೀಡಾಕೂಟ ಪೂರಕವಾಗಿವೆ ಎಂದರು.

ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡಾ ಚಟುವಟಿಕೆ ದೈಹಿಕ ಸದೃಢತೆ ಕಾಪಾಡುತ್ತವೆ. ಹಾಗಾಗಿ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಪೊಲೀಸರು ಭಾಗವಹಿಸಬೇಕು. ಕಚೇರಿ ಕೆಲಸದ ಜತೆಗೆ ಪ್ರತಿನಿತ್ಯ ಜ್ಞಾನ, ಯೋಗ, ವಾಕಿಂಗ್ ಮತ್ತು ಇತರೆ ಉತ್ತಮ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಬೇಕು. ಎಷ್ಟೆ ಕೆಲಸದ ಒತ್ತಡದಲ್ಲಿದ್ದರೂ ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ. ಹಾಗೆಯೇ ನಿಮ್ಮ ಕುಟುಂಬ ಮತ್ತು ನಿಮ್ಮ ಸ್ನೇಹಿತರಿಗೂ ಸಮಯ ನೀಡಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯಪೂರ್ಣ ಜೀವನಕ್ಕೆ ಕ್ರೀಡೆಗಳು ಪೂರಕವಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಪೊಲೀಸರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಪ್ರತಿಯೊಬ್ಬರು ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಪೊಲೀಸ್ ಇಲಾಖೆಯ ಕ್ರೀಡಾಕೂಟಗಳು ಶಿಸ್ತುಬದ್ಧವಾಗಿ ನಡೆಯುತ್ತವೆ. ಎಲ್ಲ ಸ್ಪರ್ಧಿಗಳು ಮತ್ತು ತಂಡಗಳು ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಣಾಯಕರು ನೀಡುವ ತೀರ್ಪಿಗೆ ಬದ್ಧರಾಗಿರಬೇಕು. ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಬಿ.ಎಸ್. ನೇಮಗೌಡ, ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಡಿವೈಎಸ್ಪಿ ಶಶಿಧರಯ್ಯ ಹಿರೇಮಠ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ, ನಿವೃತ್ತ ಪೊಲೀಸರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆಕರ್ಷಕ ಪಥಸಂಚಲನ: ಕೊಪ್ಪಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2025ರ ಅಂಗವಾಗಿ ಪೊಲೀಸ್ ಇಲಾಖೆಯ ಒಟ್ಟು 8 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

ವಿವಿಧ ಸ್ಪರ್ಧೆಗಳು: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಶನಿವಾರ ಕೊಪ್ಪಳದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಸಿಬ್ಬಂದಿಗಾಗಿ 100 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ ಮತ್ತು ಭರ್ಚಿ ಎಸತೆ (ಜಾವೆಲಿನ್ ಥ್ರೋ) ಮತ್ತು ಇತರೆ ಸ್ಪರ್ಧೆಗಳು ಹಾಗೂ ಪೊಲೀಸ್ ಅಧಿಕಾರಿಗಳಿಗಾಗಿ ಗುಂಡು ಎಸೆತ, ಚಕ್ರ ಎಸೆತ ಮತ್ತು ಭರ್ಚಿ ಎಸತೆ (ಜಾವೆಲಿನ್ ಥ್ರೋ) ಮತ್ತು ಇತರೆ ಸ್ಪರ್ಧೆಗಳು. ಗುಂಪು ಸ್ಪರ್ಧೆಗಳಲ್ಲಿ ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ ಮತ್ತು ಇತರೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ನ. 16 ಮತ್ತು 17ರಂದು 400 ಮೀ, 800 ಮೀ, 1500 ಮೀ, 5 ಸಾವಿರ ಮೀಟರ್ ಓಟ ಹಾಗೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ನಡೆಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ