ಕನ್ನಡಪ್ರಭ ವಾರ್ತೆ ಯಾದಗಿರಿ
ಇಲ್ಲಿನ ಟೆನಿಸ್ ಕ್ಲಬ್ ವತಿಯಿಂದ ಆಫೀಸರ್ಸ್ ಕ್ಲಬ್ ಆವರಣದಲ್ಲಿ ರಾಜ್ಯದ ವಿವಿಧ ಕ್ರೀಡಾಪಟುಗಳಿಂದ ಮೂರು ದಿನಗಳ ಕಾಲ ನಡೆದ 30, 40, 50, 60 ಮತ್ತು 70 ವಿಭಾಗಗಳ ಕ್ರೀಡೆಗಳಲ್ಲಿ ವಿಜೇತ ಆಟಗಾರರಿಗೆ ಭಾನುವಾರ ಸಂಜೆ ಮಾಜಿ ಶಾಸಕ ದಿ.ನಾಗಣ್ಣಗೌಡ ಕಂದಕೂರ ಫೌಂಡೇಶನ್ ದಿಂದ ಕಪ್ ಗಳನ್ನು ವಿತರಿಸಿ ಶಾಸಕರು ಮಾತನಾಡಿದರು.
ದೇಶಿ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದ ಶಾಸಕ ಕಂದಕೂರ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮೂಲಕ ಆಟಗಳನ್ನು ಆಡಬೇಕು. ಸೋಲೇ ಗೆಲುವಿನ ಮೆಟ್ಟಿಲು ಎಂಬ ಭಾವನೆಯಲ್ಲಿ ಮತ್ತು ಸ್ಪರ್ಧಾತ್ಮಕ ಮನಸ್ಸಿನಿಂದ ಆಟಗಾರರು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸದೃಢ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸರಿಯಾದ ಮದ್ದು. ನಿತ್ಯ ವಾಕಿಂಗ್, ಯೋಗ, ಧ್ಯಾನ ಮತ್ತು ಆಟಗಳನ್ನು ಆಡುವುದರಿಂದ ರಕ್ತದೊತ್ತಡ, ಮಧುಮೇಹ ಸಹಿತ ಇತರ ರೋಗಗಳನ್ನು ತಡೆಯಬಹುದು ಎಂದರು.ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಇಂದು ಕ್ರೀಡೆಗಳಿಗೆ ಬಹಳ ಮಹತ್ವವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಹೆಚ್ಚಾಗಿದ್ದು, ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರಗಳು ಆರ್ಥಿಕವಾಗಿ ಸಹಿತ ಇತರ ಸೌಲಭ್ಯಗಳು ನೀಡುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭಹಾರೈಸಿದರು.