ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು, ಒತ್ತಡದ ಸರಕಾರಿ ನೌಕರಿ ನಿಭಾಯಿಸುವಲ್ಲಿ ಪ್ರತಿಯೊಬ್ಬರು ಮಾನಸಿಕವಾಗಿ ದೈಹಿಕವಾಗಿ ಕುಗ್ಗುವ ಪರಿಸ್ಥಿತಿಯನ್ನು ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ಪ್ರತಿವರ್ಷ ಇಂತಹದೊಂದು ಕ್ರೀಡಾಕೂಟ ಆಯೋಜನೆಗೆ ಪರಂಪರೆ ಹಾಕಿಕೊಳ್ಳಬೇಕು. ಅಂದಾಗ ಮಾತ್ರ ಕ್ರೀಡೆಗೂ ಹಾಗೂ ಒತ್ತಡದ ಬದುಕುನಿಂದ ಹೊರಬಂದು ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಕ್ರೀಡಾ ಧ್ವಜ ಸ್ವಾಗತಿಸಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕ್ರೀಡೆಯ ಮಹತ್ವ ಅರಿಯಬೇಕು. ಸೋಲು-ಗೆಲುವಿನ ಸೋಪಾನ ಎಂದು ತಿಳಿದು ಪ್ರತಿ ಆಟದಲ್ಲಿ ಸೋಲು ಬರುವದಿಲ್ಲ. ಗೆಲುವು ಬರುವದಿಲ್ಲ. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಪೊಲೀಸ್ ಇಲಾಖೆ ಆಯೋಜಿಸಿದ ಕ್ರೀಡಾಕೂಟದ ಶಿಸ್ತನ್ನು ಪಂಚಾಯತ್ ರಾಜ್ ನೌಕರರ ಕ್ರೀಡಾಕೂಟದಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಇಂತಹದೊಂದು ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಲು ಬಂದಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕ್ರೀಡಾ ಬಲೂನು ಹಾರಿಸಿ ಮಾತನಾಡಿದ ಯುಕೆಪಿ ಮಹಾವ್ಯವಸ್ಥಾಪಕ ಗಿತ್ತೆ ಮಾಧವ ವಿಠಲರಾವ್, ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗ್ರಾಮೀಣ ಪ್ರದೇಶದ ಕ್ರೀಡಾಕೂಟಗಳನ್ನು ಗುರುತಿಸಿ ಅದರಲ್ಲೂ ಸರಕಾರಿ ನೌಕರ ಕ್ರೀಡಾಪಟು ಗುರುತಿಸಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ತಿಳಿಸಿದರು.ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಈ ಬಾರಿ ಕ್ರೀಡಾಕೂಟ ಅತೀ ವಿಜೃಂಭಣೆಯಿಂದ ನಡೆದಿದ್ದು, ಪ್ರತಿ ತಾಲೂಕು ಮಟ್ಟದಿಂದ ಬಂದಂತಹ ಕ್ರೀಡಾಪಟುಗಳು ತಮ್ಮದೇ ಆದ ಸಮವಸ್ತ್ರ ಧರಿಸಿ ಕ್ರೀಡಾ ಮನೋಭಾವದಿಂದ ಭಾಗವಹಿಸಿದ್ದು, ಆಕರ್ಷಣೀಯವಾಗಿದೆ. ಜಿಪಂ ಸಿಇಒ ಕುರೇರ ಅವರ ಪ್ರೇರಣೆಯಿಂದ ಕ್ರೀಡಾಕೂಟ ಯಶಸ್ವಿಯಾಗಲು ಸಹಕಾರಿಯಾಗಿದೆ ಎಂದರು. ಪ್ರಾರಂಭದಲ್ಲಿ ಜಿಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಪುನಿತ್ ಬಿ.ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷ ರಾಜು ವಾರದ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿ ಇತರರಿದ್ದರು.