ಧರ್ಮದ ಹೆಸರಿನಲ್ಲಿ ದ್ವೇಷ ಹರಡಲು ಸಂವಿಧಾನದಲ್ಲಿ ಅವಕಾಶವಿಲ್ಲ: ಡಾ.ಎಚ್‌.ಸಿ.ಮಹದೇವಪ್ಪ

KannadaprabhaNewsNetwork |  
Published : Nov 20, 2024, 12:33 AM IST
3 | Kannada Prabha

ಸಾರಾಂಶ

ಈ ದೇಶದ ಅಲ್ಪಸಂಖ್ಯಾತರು, ಬಹುಸಂಖ್ಯಾತರ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದಾರೆ. ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಮತ್ತು ಜವಬ್ದಾರಿಯಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ಪ್ರಸ್ತುತ ಕೋಮುವಾದದ ನೆರಳು ಭಾರತದ ಪ್ರಜಾಪ್ರಭುತ್ವದ ಮೇಲೆ ತನ್ನ ಕಬಂಧಬಾಹು ಚಾಚುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯಾವ ಧರ್ಮದಲ್ಲೂ ಅಧರ್ಮ ಹಾಗೂ ಅನೀತಿಯನ್ನು ಬೋಧಿಸಿಲ್ಲ. ದ್ವೇಷವನ್ನು ಹರಡಿ ಎಂದು ಹೇಳಿಲ್ಲ. ಆದರೆ, ಕೆಲವರು ಧರ್ಮದ ಹೆಸರಿನಲ್ಲಿ ಇತರರ ಮೇಲೆ ಸವಾರಿ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ನಗರದ ಜಗನ್ಮೋಹನ ಅರಮನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕವು ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಂವಿಧಾನದ ಆಶಯಕ್ಕೆ ನಿಷ್ಠಾವಂತರಾಗಿರಬೇಕು. ಜೀವನದ ಮೌಲ್ಯಗಳ ಮೇಲೆ ಧರ್ಮ ಸೃಷ್ಠಿಯಾಗಿದೆ. ಹೀಗಾಗಿ, ಮನುಷ್ಯರು ಸಾಮರಸ್ಯದಿಂದ ಬದುಕಬೇಕು ಎಂದು ಅವರು ಕರೆ ನೀಡಿದರು.

ಈ ದೇಶದ ಅಲ್ಪಸಂಖ್ಯಾತರು, ಬಹುಸಂಖ್ಯಾತರ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದಾರೆ. ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಮತ್ತು ಜವಬ್ದಾರಿಯಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ಪ್ರಸ್ತುತ ಕೋಮುವಾದದ ನೆರಳು ಭಾರತದ ಪ್ರಜಾಪ್ರಭುತ್ವದ ಮೇಲೆ ತನ್ನ ಕಬಂಧಬಾಹು ಚಾಚುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮಲ್ಲರ ಮೇಲಿದೆ. ಸಂವಿಧಾನದ ಆಶಯಗಳನ್ನು ಗೌರವಿಸುವರನ್ನು ತಾವೆಲ್ಲರೂ ಬೆಂಬಲಿಸಬೇಕು. ರಾಜಕೀಯ ಸ್ವಾತಂತ್ರ್ಯದಿಂದ ಏಳಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆರ್ಥಿಕ ಸ್ವಾವಲಂಬನೆ ಅಗತ್ಯವಿದೆ. ಶಿಕ್ಷಣದ ಸವಲತ್ತುಗಳು ಪ್ರತಿಯೊಬ್ಬರಿಗೂ ದೊರಕಬೇಕು. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ಅನೇಕ ಸೌಲಭ್ಯಗಳನ್ನು ಎಲ್ಲಾ ವರ್ಗದವರಿಗೂ ದೊರಕಿಸುತ್ತಿದೆ ಎಂದರು.

ವಿಧಾನ‌ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶೋಷಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಹಾಗೂ ಸಾಮಾಜಿಕ ನ್ಯಾಯದ ರಕ್ಷಣೆಗಾಗಿ ನಾವು ಶ್ರಮಿಸಲಿದ್ದೇವೆ ಎಂದು ಹೇಳಿದರು.

ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ, ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಮ್ಮದ್ ಸಲೀಮ್ ಹಂಚಿನಮನಿ, ಜಿಲ್ಲಾಧ್ಯಕ್ಷ ಸೈಯದ್ ಮುದಸ್ಸಿರ್, ಪದಾಧಿಕಾರಿಗಳಾದ ಅಫ್ಸರ್ ಪಾಷಾ, ಸೈಯದ್ ದಸ್ತಗೀರ್, ಅಜೀಜ್ ಖಾನ್, ನವೀದ್ ಪಾಷಾ, ಸಾದಿಕ್, ಪ್ರೊ. ನಬಿ ಜಾನ್ ಮೊದಲಾದವರು ಇದ್ದರು.ಸಮಾಜ ನಮ್ಮೊಂದಿಗಿದೆ, ಅದರಂತೆ ನಾವೂ ಸಮಾಜದ ಜೊತೆಗೆ ಇರುವುದನ್ನು ರೂಢಿಸಿಕೊಳ್ಳಬೇಕು. ಯಾರು ಅನ್ಯ ಧರ್ಮಕ್ಕೆ ಗೌರವ ನೀಡುವುದಿಲ್ಲವೋ, ಅವರು ತಮ್ಮ ಧರ್ಮವನ್ನು ಎಂದಿಗೂ ರಕ್ಷಣೆ ಮಾಡಿಕೊಳ್ಳಲಾಗುವುದಿಲ್ಲ.

- ತನ್ವೀರ್ ಸೇಠ್, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್