ಕನ್ನಡಪ್ರಭ ವಾರ್ತೆ ನಾಗಮಂಗಲ
ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ 1.45ಕ್ಕೆ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ರಥೋತ್ಸವದ ಬಳಿಕ ದೇವಸ್ಥಾನದಲ್ಲಿ ಸಂಜೆವರೆಗೂ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.ದೇವಿ ಮೂಲ ಸ್ಥಾನ ಚಿಣ್ಯ ಸೇರಿದಂತೆ, ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹ್ರಾರು ಭಕ್ತರು ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾಗಿ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ತುರುವೇಕೆರೆಯ ಗೀತಾ ಮತ್ತು ರಾಜಣ್ಣ ದಂಪತಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು
ಉತ್ತಮ ರಾಸುಗಳಿಗೆ ಬಹುಮಾನ:
ಇದಲ್ಲದೇ, ಉತ್ತಮ ತಳಿಯ ಬಿತ್ತನೆ ಹೋರಿಯನ್ನು ಗುರುತಿಸಿ ಅಲ್ಪಹಳ್ಳಿ ಗ್ರಾಮದ ಪುನಿತ್‌ಕುಮಾರ್ ಅವರಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಇನ್ನುಳಿದ 35ಕ್ಕೂ ಹೆಚ್ಚು ರಾಸುಗಳ ಮಾಲೀಕರಿಗೆ ಸಮಾಧಾಕರ ಬಹುಮಾನ ನೀಡಿ ರೈತರನ್ನು ಪ್ರೋತ್ಸಾಹಿಸಲಾಯಿತು.