ಸಂಭ್ರಮದಿಂದ ನಡೆದ ಸಖರಾಯಪಟ್ಟಣದ ಶ್ರೀ ಅಂತರಘಟ್ಟಮ್ಮ ರಥೋತ್ಸವ

KannadaprabhaNewsNetwork | Published : Apr 28, 2025 12:50 AM

ಸಾರಾಂಶ

ಕಡೂರುತಾಲೂಕಿನ ಸಖರಾಯಪಟ್ಟಣದಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

- ಊರಿನ ಪ್ರಮುಖ ಬೀದಿಗಳಲ್ಲಿ ದೇವಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಸಖರಾಯಪಟ್ಟಣದಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮಂಗಳವಾರದ ಬಾನ ಸೇವೆಯಿಂದ ಆರಂಭವಾದ ಶ್ರೀ ದೇವಿಯವರ ಧಾರ್ಮಿಕ ಕಾರ್ಯಕ್ರಮ, ಉತ್ಸವಾದಿಗಳು ಹಾಗು ತೇರಿನ ಹಬ್ಬದೊಂದಿಗೆ ಚೋಮ ದೇವರ ಉತ್ಸವ ನಡೆಯಿತು. ಶನಿವಾರ ಬೆಳಗ್ಗೆ ಗ್ರಾಮ ದೇವತೆಗಳಾದ ಶ್ರೀ ಅಂತರ ಘಟ್ಟಮ್ಮ, ಶ್ರೀ ಕೊಲ್ಲಾಪುರದಮ್ಮ, ಶ್ರೀ ಯಲ್ಲಮ್ಮದೇವಿ ಮತ್ತು ಶ್ರೀ ಮಲ್ಲೇಶ್ವರದಮ್ಮನವರ ಉತ್ಸವ ಮೂರ್ತಿಗಳನ್ನು ಶೃಂಗರಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಧ್ಯಾಹ್ನ ಪಾನಕದ ಬಂಡಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯದ ಆವರಣಕ್ಕೆ ಬಂದ ನಂತರ ಚೋಮ ದೇವರುಗಳು ರಥದ ಸುತ್ತ ಪ್ರದಕ್ಷಿಣೆ ಹಾಕಿದವು. ದೇವಾಲಯ ಸಮಿತಿ ಅಧ್ಯಕ್ಷ ದೇವರಾಜು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆಯುತ್ತ ಸುಡು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ರಥವನ್ನು ಸಂಪ್ರದಾಯದಂತೆ ಸಿಡಿ ಕಂಬದವರೆಗೆ ಎಳೆದು ಪುನಃ ದೇವತಾ ಮೂರ್ತಿಗಳನ್ನು ದೇವಾಲಯಕ್ಕೆ ಕರೆತರಲಾಯಿತು.

ಗ್ರಾ.ಪಂ.ನಿಂದ ಪಾನಕ ಮತ್ತು ಮಜ್ಜಿಗೆ ವಿತರಣೆ ಮತ್ತು ಶ್ರೀ ದುರ್ಗಾ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಾನುವಾರ ಮುತ್ತಿನ ಪಲ್ಲಕ್ಕಿ ಉತ್ಸವದಲ್ಲಿ ಎಲ್ಲ ದೇವತೆಗಳನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಚಿಕ್ಕಮಕ್ಕಳು ಸೇರಿದಂತೆ ಆಯ್ದ ಭಕ್ತರು ಸಿಡಿ ಸೇವೆ ಆಡಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ, ದೇವಾಲಯ ಸಮಿತಿಯ ರತ್ನಾಕರ, ಲೋಕೇಶ್‍ ಮಾಸ್ಟರ್, ಶಿವಮೂರ್ತಿ, ಸತೀಶ್, ರಾಮಣ್ಣ, ವೆಂಕಟೇಶ್, ಶಿವರಾಮಣ್ಣ ಹಾಗೂ ಸಮಿತಿಯ ಸದಸ್ಯರು ಭಗವಹಿಸಿದ್ದರು. 27ಕೆಕೆಡಿಯು2. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಗ್ರಾಮ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

Share this article