ದಾಬಸ್‍ಪೇಟೆ: ತ್ಯಾಮಗೊಂಡ್ಲು ಪಟ್ಟಣದ ದೇವರಾಜ ಮೊದಲಿಯರ್ ವೃತ್ತದಲ್ಲಿರುವ ಶ್ರೀ ಬೈಲಾಂಜನೇಯಸ್ವಾಮಿ, ಸೀತಾಲಕ್ಷ್ಮಣ ಸಮೇತ ಶ್ರೀರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮು ಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಮುಂಜಾನೆಯಿಂದಲೇ ದೇಗುಲದಲ್ಲಿ ಪೂಜೆ, ಹೊಮ- ಹವನಗಳು ನಡೆದವು. ಮಧ್ಯಾಹ್ನ 1.40ರ ವೇಳೆಗೆ ವೀರಗಾಸೆ, ದೇವರ ಕುಣಿತ, ತಮಟೆ ವಾದ್ಯ, ಪಟ್ಟದ ಕುಣಿತ ಹಾಗೂ ಮಂಗಳವಾದ್ಯಗಳು ಹಾಗೂ ಹೋಬಳಿಯ ಸಾವಿರಾರು ಭಕ್ತರ ಜಯಘೋಷದೊಂದಿಗೆ ಸ್ವಾಮಿ ರಥೋತ್ಸವ ನಡೆಯಿತು.ವಾಡಿಕೆಯಂತೆ ಎಲ್ಲಾ ಸಮುದಾಯದ ಭಕ್ತರು ಒಂದೆಡೆ ಸೇರಿ ಅದ್ಧೂರಿಯಾಗಿ ರಥೋತ್ಸವ ನಡೆಸಿಕೊಂಡು ಬರುತ್ತಾರೆ. ರಥೋತ್ಸವದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು, ರಥಕ್ಕೆ ಬಾಳೆಹಣ್ಣು, ದವನ ಹಾಗೂ ಹೋಮ ಕುಂಡಕ್ಕೆ ಹರಳು ಮತ್ತು ಎಳ್ಳನ್ನು ಹಾಕುವ ಮೂಲಕ ತಮ್ಮ ಹರಕೆ ಸೇವೆಯನ್ನು ಸ್ವಾಮಿಗೆ ಅರ್ಪಿಸಿದರು.
ಅಗ್ನಿವಂಶ ಕ್ಷತ್ರೀಯ, ಕುಂಬಾರ, ಕುರುಹಿನ ಶೆಟ್ಟಿ ದೇವಾಂಗ, ಮರಚರು, ಆರ್ಯವೈಶ್ಯ, ಆರ್ಯ ಈಡಿಗ, ಮೊದಲಿಯರ್ ಸಮುದಾಯದ ಭಕ್ತರು ತಮ್ಮ ಕೊಪ್ಪಲುಗಳಲ್ಲಿ ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ, ಕೊಸಂಬರಿ ಹಾಗೂ ಅನ್ನಸಂತರ್ಪಣೆ ಮಾಡಿದರು.ಶಾಸಕ ಎನ್. ಶ್ರೀನಿವಾಸ್ ರಥೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ತ್ಯಾಮಗೊಂಡ್ಲು ಗ್ರಾಮದ ಶ್ರೀ ಬೈಲಾಂಜನೇಯಸ್ವಾಮಿಯು ಕ್ಷೇತ್ರದ ಜನತೆಗೆ ಆರೋಗ್ಯ, ಆಯುಷ್ಯ ನೀಡಿ ಕಾಪಾಡಲಿ, ಸ್ವಾಮಿ ಕೃಪೆಯಿಂದ ಕ್ಷೇತ್ರದ ಅಭಿವೃದ್ಧಿಯನ್ನು ಮುಂದಿನ ಮೂರು ವರ್ಷಗಳಲ್ಲಿ ಮತ್ತಷ್ಟು ಮಾಡುತ್ತೇನೆ, ಅಭಿವೃದ್ಧಿ ಕಾರ್ಯಗಳಿಗೆ ಎಷ್ಟೇ ಟೀಕೆಗಳು ಬಂದರೂ ಜನರ ಹಿತದೃಷ್ಟಿಯಿಂದ ಹೆಚ್ಚು ಅನುಕೂಲಕರ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ಬಗರ್ ಹುಕುಂ ಸಮಿತಿ ಸದಸ್ಯ ವಾಸುದೇವ್, ಎನ್‍ಪಿಎ ಸದಸ್ಯ ಪ್ರಕಾಶ್ ಬಾಬು, ಮುಖಂಡರಾದ ಸೋಮಶೇಖರ್, ಬುಲೆಟ್ ರಾಜು, ವಾದಕುಂಟೆ ಚನ್ನಕೃಷ್ಣ ಮಂಜುನಾಥ್, ಕೋಡಿಗೆಹಳ್ಳಿ ಗ್ರಾಪಂ ಅಧ್ಯಕ್ಷ ಅಪ್ಪಾಜಿಗೌಡ, ಬೀರಗೊಂಡನಹಳ್ಳಿ ಮಲ್ಲೇಶ್, ಪ್ರದೀಪ್, ನವೀನ್, ಗಣೇಶ್, ಚಂದ್ರಪ್ಪ, ನಾರಾಯಣಪ್ಪ ಸೇರಿ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.