ಸರ್ಕಾರದ ಮಾನದಂಡದಂತೆ ಕೆಲಸ ಮಾಡಿ

KannadaprabhaNewsNetwork |  
Published : May 14, 2025, 12:02 AM IST
ಫೋಠೊ ಪೈಲ್ : 13ಬಿಕೆಲ್1 | Kannada Prabha

ಸಾರಾಂಶ

ಆಸ್ಪತ್ರೆ, ಕಚೇರಿಗಳಲ್ಲಿ ಪಾಲಿಟಿಕ್ಸ್‌ ಮಾಡುವುದು ತಕ್ಷಣ ನಿಲ್ಲಿಸಿ

ಭಟ್ಕಳ: ಇಲ್ಲಿನ ತಾಪಂ ಸಭಾಭ ಭವನದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ಕಚೇರಿಗೆ ಬರುವ ಸಾರ್ವಜನಿಕರನ್ನು ಗೌರಯುತವಾಗಿ ನಡೆಸಿಕೊಂಡು ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ಅಧಿಕಾರಿಗಳು ಸರ್ಕಾರದ ಮಾನದಂಡದ ಪ್ರಕಾರ ಕೆಲಸ ಮಾಡಬೇಕು. ಸರ್ಕಾರಿ ಆಸ್ಪತ್ರೆ ಸೇರಿದಂತೆ ಕೆಲವು ಕಚೇರಿಯಲ್ಲಿ ಪಾಲಿಟಿಕ್ಸ ಮಾಡಲಾಗುತ್ತಿದ್ದು, ಪಾಲಿಟಿಕ್ಸ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಅಧಿಕಾರಿಗಳು ಪಾಲಿಟಿಕ್ಸ ಮಾಡುವುದನ್ನು ಬಿಟ್ಟು ಕಚೇರಿಗೆ ಬರುವ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳಿಗೆ ಕೆಲಸ ಮಾಡಲು ಮನಸ್ಸು ಇಲ್ಲದಿದ್ದರೆ ಇಲ್ಲಿಂದ ಹೋಗಬಹುದು ಎಂದು ಖಡಕ್ ಸೂಚನೆ ಕೊಟ್ಟ ಸಚಿವರು ಅಧಿಕಾರಿಗಳು ಯಾರದ್ದೋ ಒತ್ತಡ, ಮರ್ಜಿಗೆ ಕೆಲಸ ಮಾಡುವುದು ಸರಿಯಲ್ಲ. ಮಾಹಿತಿ ಹಕ್ಕು ಅರ್ಜಿಗೆ ಹೆದರಿ ಅಧಿಕಾರಿಗಳು ಕಾರ್ಯ ನಿರ್ವಹಿಸುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಹೊನ್ನಾವರದ ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯಲಾಗುತ್ತಿದೆ ಎಂದು ಸುಳ್ಳು ವದಂತಿ ಹರಡಲಾಗಿದೆ. ಪತ್ರಕರ್ತರು ಸರಿಯಾಗಿ ದಾಖಲೆ ಇಲ್ಲದೇ ಯಾರೋ ಹೇಳಿದ್ದನ್ನು ಪತ್ರಿಕೆಯಲ್ಲಿ ಹಾಕುವುದು ಸರಿಯಲ್ಲ. ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ನಾನು ಕರೆಂಟ್ ಬಿಲ್ ತುಂಬುವುದು ಬಾಕಿ ಇದೆ ಎಂದು ಆರೋಪಿಸಲಾಗಿದ್ದು, ಪ್ರತಿ ತಿಂಗಳೂ ನಾನು ಕರೆಂಟ್ ಬಿಲ್ ಪಾವತಿಸುತ್ತಿದ್ದೇನೆ. ಬೇಕಾದರೆ ಸಭೆಯಲ್ಲಿರುವ ಹೆಸ್ಕಾಂ ಅಧಿಕಾರಿಯಿಂದಲೇ ಮಾಹಿತಿ ಪಡೆಯಿರಿ ಎಂದು ಸಚಿವರು ಹೇಳಿದ್ದಲ್ಲದೇ ಹೆಸ್ಕಾಂ ಅಧಿಕಾರಿ ಅವರೇ ಸಚಿವರು ಪ್ರತಿ ತಿಂಗಳು 6-7 ಲಕ್ಷ ಕರೆಂಟ್ ಬಿಲ್ ಪಾವತಿಸುತ್ತಿದ್ದಾರೆಂದರು.

ವಿದ್ಯುತ್ ಬಳಕೆ ಕಡಿಮೆ ಮಾಡಲು ನಮ್ಮ ಶಾಲೆಗೆ ಸೋಲಾರ ಸಿಸ್ಟಮ್ ಅಳವಡಿಸಲಾಗಿದೆ. ಪ್ರಸ್ತುತ ನಮಗೆ ಬೇಕಾದಷ್ಟು ವಿದ್ಯುತ್ ನ್ನು ಸೋಲಾರ್ ಸಿಸ್ಟ್ ಮ್ ನಿಂದ ನಾವೇ ಉತ್ಪಾದಿಸಿಕೊಳ್ಳುತ್ತಿದ್ದೇವೆಂದ ಸಚಿವರು ಅಧಿಕಾರಿಗಳು ಯಾರಿಗೋ ಹೆದರಿ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಸರ್ಕಾರದ ನೀತಿ ನಿಯಮ ಮಾನದಂಡದಂತೆ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ವರದಿ ನೀಡಲು ಮುಂದಾದಾಗ ಸಚಿವರು,ಆಸ್ಪತ್ರೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದು ಸರಿಯಲ್ಲ. ವೈದ್ಯರು ಸೇರಿದಂತೆ ಎಲ್ಲರಿಗೂ ರಾಜಕೀಯ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿ. ಆಸ್ಪತ್ರೆಯಲ್ಲಿ ಔಷಧಿ ಕೊರತೆ ಆದರೆ ಖರೀದಿಸಿ. ಔಷಧಿ ಇಲ್ಲ ಎಂದು ಹೊರಗಡೆ ಖರೀದಿಸಲು ಚೀಟಿ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದರು.

ವಿದ್ಯುತ್ ಸಮಸ್ಯೆ ಆಗದಂತೆ ನಿಗಾ ವಹಿಸಿ ಎಂದು ಸಚಿವರು ಹೆಸ್ಕಾಂ ಅಭಿಯಂತರರಿಗೆ ಸೂಚಿಸಿದಾಗ ಉಪಸ್ಥಿತರಿದ್ದ ಪುರಸಭೆ ಪ್ರಭಾರೆ ಅಧ್ಯಕ್ಷ ಅಲ್ತಾಪ್ ಖರೂರಿ, ಎರಡು ತಿಂಗಳಿನಿಂದ ವಿದ್ಯುತ್ ಸಮಸ್ಯೆ ಜೋರಾಗಿದೆ. ಪದೇ ಪದೇ ವಿದ್ಯುತ್ ಹೋಗುವುದು ಬರುವುದು ಆಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆ ಆಗಿದೆ ಎಂದರು.

ವಿದ್ಯುತ್ ಮಾರ್ಗದಲ್ಲಿನ ಸಮಸ್ಯೆಯಿಂದ ಈ ರೀತಿ ಆಗುತ್ತಿದ್ದು, ಸರಿಪಡಿಸಲಾಗುತ್ತಿದೆ ಎಂದು ಹೆಸ್ಕಾಂ ಅಭಿಯಂತರರು ತಿಳಿಸಿದರು.ರಜೆ ಸಮಯದಲ್ಲಿ ಸರಿಯಾಗಿ ಬಸ್ ಓಡಿಸದೇ ಇರುವುದಕ್ಕೆ ಡಿಪೋ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಸರ್ಕಾರ ನಿಮಗೆ ಬಸ್‌, ಚಾಲಕರು, ಕಂಡಕ್ಟರ್ ಎಲ್ಲ ವ್ಯವಸ್ಥೆ ಕೊಟ್ಟಿದ್ದರೂ ಸಹ ಸರಿಯಾಗಿ ಬಸ್ ಓಡಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಸಭೆಯಲ್ಲೇ ಸಾರಿಗೆ ಡಿಸಿ ಬಳಿ ಮಾತನಾಡಿದ ಸಚಿವರು, ಎಲ್ಲ ದಿನಗಳಲ್ಲೂ ಬಸ್ಸು ಓಡಿಸುವಂತೆ ಸೂಚಿಸಿದರು. ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವಲಯ ಅರಣ್ಯಾಧಿಕಾರಿಗೆ ಸೂಚಿಸಿದ ಸಚಿವರು, ಕಾಡು ಪ್ರಾಣಿಯಿಂದ ದಾಳಿಯಾದವರಿಗೆ ತ್ವರಿತ ಪರಿಹಾರ ಒದಗಿಸಬೇಕು.ಹಳೇ ಅತಿಕ್ರಮಣದಾರರಿಗೆ ತೊಂದರೆ ಕೊಡಬಾರದು ಎಂದರು.

ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಅನುಕೂಲವಾಗಲು 10 ಸಾವಿರ ಮನೆ ಮಂಜೂರಿಸಲಾಗಿದ್ದು, ಸಮರ್ಪಕವಾಗಿ ಈ ಯೋಜನೆ ಅನುಷ್ಠಾನಗೊಳಿಸಿ ಬಡಮೀನುಗಾರರಿಗೆ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗೆ ಹೇಳಿದರು.

ಸಭೆಯಲ್ಲಿ ಸಹಾಯಕ ಆಯುಕ್ತೆ ಕಾವ್ಯಾರಾಣಿ ಕೆ.ವಿ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ,ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ನಾಯಕ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ