ಇಂದಿನಿಂದ ಶ್ರೀ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 12, 2025, 12:52 AM IST
೧೧ಕೆಎಂಎನ್‌ಡಿ-೫ಶ್ರೀ ಬೆಟ್ಟದರಸಮ್ಮ ದೇವಿ ಚಿತ್ರ. | Kannada Prabha

ಸಾರಾಂಶ

ಮಾ.೧೫ರಂದು ತಟ್ಟೆಪೊಜೆ, ಮಾ.೧೮ರಂದು ದೊಡ್ಡ ಜಾತ್ರೆ ಮತ್ತು ಕರಗೋತ್ಸವ ನಡೆಯಲಿದೆ. ಮಾ.೧೯ರಂದು ರಾತ್ರಿ ವಿಶೇಷ ಆರತಿ ಉತ್ಸವ ಹಾಗೂ ಕೊಂಡೋತ್ಸವ ನಡೆದು ಒಂದು ವಾರಗಳ ಕಾಲ ನಡೆಯುವ ಜಾತ್ರೆ ಸಂಪನ್ನಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಬಸವನ ಬೆಟ್ಟದ ತಪ್ಪಲ್ಲಿನಲ್ಲಿ ನೆಲೆಸಿರುವ ಏಳು ಗ್ರಾಮಗಳ ಆರಾಧ್ಯ ದೇವತೆ ಶ್ರೀ ಬೆಟ್ಟದರಸಮ್ಮನ ಜಾತ್ರಾ ಮಹೋತ್ಸವವು ಬುಧವಾರ (ಮಾ.೧೨)ದಿಂದ ಪ್ರಾರಂಭಗೊಂಡು ಒಂದು ವಾರಗಳ ಕಾಲ ನಿತ್ಯ ವಿವಿಧ ಪೂಜಾ ಕಾರ್ಯಕ್ರಮಗಳೊಡನೆ ಭಕ್ತಿ -ಭಾವದೊಂದಿಗೆ ನಡೆಯಲಿದೆ.

ಮಾ.೧೨ರಂದು ಮೊದಲನೇ ಪೂಜೆ ಗ್ರಾಮದ ಮಧ್ಯಭಾಗದಲ್ಲಿರುವ ಕರಗದ ಮನೆಯಲ್ಲಿ ದೇವರ ಕರಗವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಬೆಟ್ಟದ ತಪ್ಪಲಲ್ಲಿರುವ ಶ್ರೀ ಬೆಟ್ಟದ ಅರಸಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ಬಾಯಿಬೀಗ ಹಾಗೂ ಪಂಜಿನ ಸೇವೆ ನಡೆಯುತ್ತದೆ. ರಾತ್ರಿ ಊರ್ಜಿ ಸಹ ನಡೆಸಲಾಗುತ್ತದೆ.

ಮಾ.೧೫ರಂದು ತಟ್ಟೆಪೊಜೆ, ಮಾ.೧೮ರಂದು ದೊಡ್ಡ ಜಾತ್ರೆ ಮತ್ತು ಕರಗೋತ್ಸವ ನಡೆಯಲಿದೆ. ಮಾ.೧೯ರಂದು ರಾತ್ರಿ ವಿಶೇಷ ಆರತಿ ಉತ್ಸವ ಹಾಗೂ ಕೊಂಡೋತ್ಸವ ನಡೆದು ಒಂದು ವಾರಗಳ ಕಾಲ ನಡೆಯುವ ಜಾತ್ರೆ ಸಂಪನ್ನಗೊಳ್ಳಲಿದೆ.

ಜಾತ್ರೆ ವಿಶೇಷ:

ಹಲಗೂರು ಸೇರಿದಂತೆ ಗುಂಡಾಪುರ, ನಂದಿಪುರ, ಕೆಂಪಯ್ಯನ ದೊಡ್ಡಿ, ದೇವಿರಹಳ್ಳಿ, ದಳವಾಯಿ ಕೋಡಿಹಳ್ಳಿ, ಬಾಳೆಹೊನ್ನಿಗ, ಎಚ್. ಬಸಾಪುರ, ಹಗಾದೂರು, ಬಸವನಹಳ್ಳಿ ಮತ್ತು ಇತರೆ ಅಕ್ಕಪಕ್ಕ ಗ್ರಾಮದವರು ಸೇರಿ ಈ ಹಬ್ಬವನ್ನು ಭಕ್ತಿ- ಭಾವದಿಂದ ಆಚರಿಸುವರು.

ವಿವಿಧ ಗ್ರಾಮದವರು ಗುಂಡಾಪುರದ ಶ್ರೀ ಬೆಟ್ಟದ ಅರಸಮ್ಮನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿಕೊಂಡು ಬೆಟ್ಟದ ಮೇಲಿರುವ ಹೆಬ್ಬೆಟ್ಟದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸುವರು.

ನಂತರ ಬಿದಿರಿನಿಂದ ತಯಾರಿಸಿದ ತಟ್ಟೆಯನ್ನು ಆರು ಗ್ರಾಮದವರು ಒಬ್ಬೊಬ್ಬರು ಒಂದು ತಟ್ಟೆಯನ್ನು ಹೊತ್ತುಕೊಂಡು ಕಡಿದಾದ ಬೆಟ್ಟದ ಕಾಲುದಾರಿಯಲ್ಲೇ ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಬೆಟ್ಟದರಸಮ್ಮನ ಸನ್ನಿಧಿಗೆ ಬರಬೇಕು. ಮೊದಲು ಯಾವ ಗ್ರಾಮದವರು ಬರುತ್ತಾರೆ, ಜಾತ್ರೆಯಲ್ಲಿ ಮೊದಲ ಪೂಜೆ ಯಾವ ಗ್ರಾಮದವರಿಗೆ ಎಂಬುದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿರುತ್ತಾರೆ. ದೇವರ ಸನ್ನಿಧಿಯಲ್ಲಿ ತಮ್ಮ ಹಸುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುತ್ತೇವೆ ಎಂದು ಹರಕ್ಕೆ ಹೊತ್ತುಕೊಂಡವರು ಆ ರಾತ್ರಿ ಹಸುಗಳು ತಂದು ಊರ್ಜಿ ಆಡಿಸುವುದು ಒಂದು ವಿಶೇಷ.

ದೊಡ್ಡ ಜಾತ್ರೆಯ ದಿನ ಬಾಳೆಹೊನ್ನಿಗ ಗ್ರಾಮಸ್ಥರು ಹರಿದ ಬಟ್ಟೆಗಳನ್ನು ತೊಟ್ಟು, ವಿವಿಧ ವೇಷಗಳನ್ನು ಧರಿಸಿಕೊಂಡು ಪರದೇಶಿ ಕುಣಿತ ನಡೆಸುತ್ತಾರೆ, ದೇವಿಗೆ ಪ್ರಿಯವಾದ ಈ ಕುಣಿತ ನೋಡುವುದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ಹರಕೆ ಹೊತ್ತುಕೊಂಡ ಭಕ್ತರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಾಯಾರಿಕೆ ನೀಗಿಸಲು ಎತ್ತಿನ ಗಾಡಿಯಲ್ಲಿ ಬೇಲದ ಹಣ್ಣಿನ ಪಾನಕ, ನಿಂಬೆಹಣ್ಣಿನ ಶರಬತ್ತು,ಮಜ್ಜಿಗೆ ನೀಡುವರು.

ದೊಡ್ಡ ಜಾತ್ರೆಯ ದಿನ ಗುಂಡು ಎತ್ತುವುದು, ಉಯ್ಯಾಲೆ ಆಡುವುದು ಒಂದು ವಿಶೇಷವಾಗಿರುತ್ತದೆ. ಬಾಯಿ ಬೀಗ, ಪಂಜಿನ ಸೇವೆ, ತಲೆಮುಡಿ ಸೇವೆ ಕಾರ್ಯಕ್ರಮಗಳು ನಡೆಯುತ್ತವೆ.

ದೇವಸ್ಥಾನದ ಆವರಣ ಮತ್ತು ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಜಾತ್ರೆಯಲ್ಲಿ ಮಹಿಳೆಯರು ಅರಿಶಿನ ಕುಂಕುಮ ನೀಡಿ ಪರಸ್ಪರ ವಿನಿಮಯ ಮಾಡಿಕೊಂಡು ಹೆಸರುಬೇಳೆ ಪಾನಕ, ಬಾಳೆಹಣ್ಣು ತಾಂಬೂಲ ನೀಡುತ್ತಾರೆ, ಅದು ಒಂದು ವಿಶೇಷವಾಗಿರುತ್ತದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ