ಕನ್ನಡಪ್ರಭ ವಾರ್ತೆ ಬಂಟ್ವಾಳ
ಮನೆಗೆ ಮರಳಲು ನಕಾರ:
ದಿಗಂತ್ ಉಡುಪಿಯಲ್ಲಿ ಪತ್ತೆಯಾದ ಕೂಡಲೇ ಪೋಲೀಸರ ಆತನನ್ನು ವಶಕ್ಕೆ ಪಡೆದುಕೊಂಡು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮಂಗಳೂರಿಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದ ಪೋಲೀಸರಿಗೆ ಆತ ಯಾವ ಕಾರಣಕ್ಕೆ ಮನೆ ಬಿಟ್ಟು ತೆರಳಿರುವುದು ಎಂಬುದರ ಬಗ್ಗೆ ವಿಚಾರ ತಿಳಿಸಿದ್ದು, ಮಹತ್ವದ ಹೇಳಿಕೆ ಕೂಡ ನೀಡಿದ್ದಾನೆ.ತಾನು ವಾಪಸು ಮನೆಗೆ ಹೋಗುವುದಿಲ್ಲ ಎಂಬ ಮಾತನ್ನು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ. ಆದರೆ ಯಾವ ಕಾರಣಕ್ಕಾಗಿ ವಾಪಸು ಮನೆಗೆ ಹೋಗುವುದಿಲ್ಲ ಎಂಬುದನ್ನು ಪೋಲೀಸರು ಸ್ಪಷ್ಟಪಡಿಸಿಲ್ಲ. ಇದೇ ಮಾತನ್ನು ಆತನ ಪೋಷಕರ ಬಳಿಯೂ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನ ಈ ಹೇಳಿಕೆ ಒಂದಷ್ಟು ಗೊಂದಲಕ್ಕೆ ಕಾರಣವಾಗಿದೆ.
ತನಿಖೆಗೆ ಅಸಹಕಾರ?:
ದಿಗಂತ್ ಮೂರು ಮೊಬೈಲ್ ಗಳ್ನು ಬಳಕೆ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದಿದ್ದು, ಆರಂಭದಲ್ಲಿ ಮನೆಯವರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು, ಬಳಿಕ ಈತ ಬಳಕೆ ಮಾಡುತ್ತಿದ್ದ ಮೊಬೈಲ್ ಬಗ್ಗೆ ಒಪ್ಪಿಕೊಂಡಿದ್ದರು. ಇದೀಗ ಆತ ಮನೆಯಿಂದ ಹೋಗುವಾಗ ಬಟ್ಟೆ ಹಾಗೂ ಶೂ ತೆಗೆದುಕೊಂಡು ಹೋಗಿರುವ ವಿಚಾರ ಪೋಲೀಸರಿಗೆ ತನಿಖೆಯ ವೇಳೆ ಗೊತ್ತಾಗಿದ್ದು, ಈ ವಿಚಾರವನ್ನು ಕೂಡ ಮನೆಯವರು ಮುಚ್ಚಿಟ್ಟಿದ್ದರು ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆಯಾದ ಆದ ಸಂದರ್ಭದಲ್ಲಿ ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ತೆರಳಿದ್ದ ಬಗ್ಗೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಬಿಳಿ ಟೀ ಶರ್ಟ್ ಹಾಕಿಕೊಂಡು ಹೋಗಿಲ್ಲ ಎಂಬುದರ ಬಗ್ಗೆ ಪೋಲೀಸರ ತನಿಖೆಯ ವೇಳೆ ಕಂಡು ಬಂದಿದೆ. ಈತ ಉಡುಪಿ ಡೀ ಮಾರ್ಟ್ ಮಳಿಗೆಯಲ್ಲಿ ಚಾಕು ಪಡೆದುಕೊಂಡಿರುವ ಬಗ್ಗೆ ಪೋಲೀಸರು ತಿಳಿಸಿದ್ದಾರೆ. ಮನೆಯವರಲ್ಲಿ ಪೋಲೀಸರು ಆತನ ಬಟ್ಟೆಬರೆಗಳ ಬಗ್ಗೆ ಕೇಳಿದಾಗ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ದಿಗಂತ್ ಮನೆಮಂದಿ ಹೇಬಿಯಸ್ ಕಾರ್ಪಸ್ ಅಜ್ಜಿ ಹಾಕಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಾ.೧೨ ರಂದು ಹೈಕೋರ್ಟ್ ಗೆ ಹಾಜರು ಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹೈಕೋರ್ಟ್ ನಲ್ಲಿ ದಿಗಂತ್ ನೀಡಬಹುದಾದ ಹೇಳಿಕೆಗಳು ಒಟ್ಟು ಪ್ರಕರಣದ ಮುಂದಿನ ಹಾದಿಗೆ ದಿಕ್ಸೂಚಿಯಾಗಲಿದೆ.