ವಾಸಿಂನನ್ನು ಮುಂಬೈನಲ್ಲಿ, ಮುಜಾಮಿಲ್‌ನನ್ನು ಭಟ್ಕಳದಲ್ಲಿ ಬಂಧನ

KannadaprabhaNewsNetwork |  
Published : Mar 12, 2025, 12:52 AM IST
ಹೊನ್ನಾವರ ಗೋ ಹತ್ಯೆ ಪ್ರಕರಣದ ಆರೋಪಿಗಳು. | Kannada Prabha

ಸಾರಾಂಶ

ಕೃತ್ಯದಲ್ಲಿ ಭಾಗಿಯಾಗಿದ್ದ ಫೈಜಾನ್, ತೌಫಿಕ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ ಪ್ರಮುಖ ಆರೋಪಿಗಳಾದ ಮುಜಾಮಿಲ್, ವಾಸಿಂ ತಲೆಮರಿಸಿಕೊಂಡಿದ್ದರು

ಕಾರವಾರ: ಹೊನ್ನಾವರ ತಾಲೂಕಿನ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ್ದ ಗೋಹತ್ಯೆ ಪ್ರಮುಖ ಆರೋಪಿಗಳಾದ ವಾಸಿಂನನ್ನು ಮುಂಬೈನಲ್ಲಿ ಹಾಗೂ ಮುಜಾಮಿಲ್‌ನನ್ನು ಭಟ್ಕಳದ ಮನೆಯಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತತ ೪೫ ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕ ಸೇರಿ ೫ ರಾಜ್ಯದಲ್ಲಿ ಹುಡುಕಾಟ ನಡೆಸಲಾಗಿದೆ. ಈ ಆರೋಪಿಗಳು ಎಲ್ಲಿದ್ದಾರೆಂದು ಇಬ್ಬರು ವ್ಯಕ್ತಿಗಳು ಮಾಹಿತಿ ನೀಡಿದ್ದು, ಇಲಾಖೆ ಘೋಷಣೆ ಮಾಡಿದಂತೆ ಅವರಿಗೆ ತಲಾ ₹ ೫೦ಸಾವಿರ ಬಹುಮಾನ ನೀಡಲಾಗುತ್ತದೆ ಎಂದರು.

ಕೃತ್ಯದಲ್ಲಿ ಭಾಗಿಯಾಗಿದ್ದ ಫೈಜಾನ್, ತೌಫಿಕ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ ಪ್ರಮುಖ ಆರೋಪಿಗಳಾದ ಮುಜಾಮಿಲ್, ವಾಸಿಂ ತಲೆಮರಿಸಿಕೊಂಡಿದ್ದರು. ಇವರ ಬಂಧನಕ್ಕಾಗಿ ೪ ತಂಡ ರಚನೆ ಮಾಡಲಾಗಿತ್ತು. ಗೋ ಹತ್ಯೆ ಬಳಿಕ ಈ ಇಬ್ಬರು ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದ ದ್ವಿಚಕ್ರ ಧಾರವಾಡದಲ್ಲಿ ಇರುವುದು ತಿಳಿಯಿತು. ಅಲ್ಲಿಗೆ ಪೊಲೀಸರು ತೆರಳುವ ಮೊದಲೇ ಇಬ್ಬರು ಪರಾರಿಯಾಗಿದ್ದರು. ರೈಲ್ವೇ ನಿಲ್ದಾಣ ಒಳಗೊಂಡು ವಿವಿಧೆಡೆ ಇರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಎಲ್ಲಿಗೆ ಹೋಗಿರಬಹುದು ಎನ್ನುವುದನ್ನು ಅಂದಾಜಿಸಿ ಕಾರ್ಯಾಚರಣೆ ಮಾಡಲಾಗಿತ್ತು. ಹಾವೇರಿ ದಾವಣಗೆರೆ, ಗದಗ, ವಿಜಯಪುರ, ಕಲಬುರ್ಗಿ ಹಾಗೂ ಗೋವಾ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯದಲ್ಲೂ ಹುಡುಕಾಟ ನಡೆಸಲಾಗಿದೆ. ಮಾ. ೮ ರಂದು ಈ ಪ್ರಕರಣದ ಆರೋಪಿ ಮುಜಾಮಿಲ್ ಭಟ್ಕಳದ ತನ್ನ ಮನೆಯಲ್ಲಿರುವ ಬಗ್ಗೆ ಒಬ್ಬ ವ್ಯಕ್ತಿ ಮಾಹಿತಿ ನೀಡಿದ್ದು, ತನಿಖಾ ತಂಡದ ಸದಸ್ಯರು ನಿಗಾ ಇರಿಸಿದ್ದರು. ಮನೆಯಲ್ಲೇ ಇರುವುದು ಖಚಿತವಾದ ಮೇಲೆ ಬಂಧಿಸಲಾಗಿದೆ. ಊರೆಲ್ಲ ಸುತ್ತಾಡಿ ಈತನ ಬಳಿ ಖರ್ಚಿಗೆ ಹಣವಿಲ್ಲದೇ ವಾಪಸ್ ಭಟ್ಕಳದ ಮನೆಗೆ ಬಂದಿದ್ದನು. ಇನ್ನೊಬ್ಬ ಆರೋಪಿ ವಾಸಿಂ ಮುಂಬೈನಲ್ಲಿ ಇರುವ ಬಗ್ಗೆ ಕೂಡಾ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು, ಅವರ ಮಾಹಿತಿ ಆಧರಿಸಿ ಫಕೀರ್ ಬಜಾರಿನ ಗುಲ್ವಾಡಿ ಸರ್ಕಲ್ ದಲ್ಲಿ ಅವನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಕೃಷ್ಣಮೂರ್ತಿ, ಭಟ್ಕಳ ಡಿಎಸ್‌ಪಿ ಮಹೇಶ, ಕಾರವಾರ ಡಿಎಸ್‌ಪಿ ಎಸ್.ವಿ. ಗಿರೀಶ ಹಾಗೂ ತನಿಖಾ ತಂಡದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ