ಮಾಗಡಿ: ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ನೆಲೆಸಿರುವ ಸುಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ವೈಭವದಿಂದ ನೆರವೇರಿಸಲಾಯಿತು.
ರಥೋತ್ಸವದ ವೇಳೆ ಭಕ್ತರು ತೇರಿಗೆ ಬಾಳೆಹಣ್ಣು ಮತ್ತು ದವನ ಅರ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಭಕ್ತ ಮಂಡಳಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸೇವಾಕರ್ತರು ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಿದರು.
ದೇವಸ್ಥಾನದಲ್ಲಿ ಅಜಗಜಾನನ ಪೂಜೆ, ಅಂಕುರಾರ್ಪಣ ಹಾಗೂ ಧ್ವಜಾರೋಹಣ ಶ್ರೀ ಭ್ರಮರಾಂಭ ಅಮ್ಮನವರು ಹಾಗೂ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯವರಿಗೆ ಕಲ್ಯಾಣೋತ್ಸವ ನೆರವೇರಿತು.ರಾತ್ರಿ 7 ಗಂಟೆಗೆ ನಂದಿ ವಾಹನೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಶ್ವಾರೋಹಣ, ತೀರ್ಥಸ್ನಾನ ಹಾಗೂ ಉಯ್ಯಾಲೆ ಉತ್ಸವಗಳೊಂದಿಗೆ ಜಾತ್ರಾ ಮಹೋತ್ಸವ ಮಾ.31ಕ್ಕೆ ಸಂಪನ್ನಗೊಳ್ಳಲಿದೆ.
ದೇವಸ್ಥಾನ ಪುರಾತನವಾಗಿದ್ದು 2027ರ ಜಾತ್ರಾ ಮಹೋತ್ಸವದ ವೇಳೆಗೆ ಜೀರ್ಣೋದ್ಧಾರಗೊಳಿಸಿ ಹೊಸ ಪೂಜಾ ಮಂದಿರ ಮತ್ತು ನೂತನ ರಥ ನಿರ್ಮಾಣ, ಒಂದು ದೊಡ್ಡ ಹಾಗೂ ಎರಡು ಚಿಕ್ಕ ಗೋಪುರಗಳ ನಿರ್ಮಾಣ, ನೆಲಕ್ಕೆ ಹೊಸ ಕಲ್ಲುಗಳನ್ನು ಅಳವಡಿಸುವುದು ಹಾಗೂ ವಿದ್ಯುತ್ ಸಂಪರ್ಕ ನವೀಕರಣಗೊಳಿಸಲು ದೇವಸ್ಥಾನ ಆಡಳಿತ ಮಂಡಳಿ ತೀರ್ಮಾನಿಸಿದೆ.