ಕನ್ನಡಪ್ರಭ ವಾರ್ತೆ ಮೇಲುಕೋಟೆ
ದಕ್ಷಿಣ ಭಾರತದ ಎರಡನೇ ಅತಿದೊಡ್ಡ ಹಾಗೂ ಆಕರ್ಷಕ ಕಲ್ಯಾಣಿಯಲ್ಲಿ ಝಗಮಗಿಸುವ ದೀಪಾಲಂಕಾರದ ನಡುವೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ತೆಪ್ಪೋತ್ಸವ ಶುಕ್ರವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು.ವಿಶ್ವಾವಸು ಸಂವತ್ಸರದ ವೈರಮುಡಿ ಬ್ರಹ್ಮೋತ್ಸವದ 8ನೇ ತಿರುನಾಳ್ ಅಂಗವಾಗಿ ವಜ್ರಖಚಿತ ರಾಜಮುಡಿ ಕಿರೀಟ ಧಾರಣೆಯೊಂದಿಗೆ ಪಂಚ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನೆರವೇರಿತು. ಕಲ್ಯಾಣಿ ನಾಲ್ಕೂ ಕಡೆ ಸೋಪಾನಗಳ ಮೇಲೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಕಿಕ್ಕಿರಿದು ತುಂಬಿ ತೆಪ್ಪೋತ್ಸವನ್ನು ಕಣ್ತುಂಬಿಕೊಂಡರು.
ಕಲ್ಯಾಣಿ ಸಾಲು ಮಂಟಪಗಳು, ಬಳೆ ಮಂಟಪಗಳು, ಭುವನೇಶ್ವರಿ ಮಂಟಪ, ಧಾರಾ ಮಂಟಪ ಸೇರಿದಂತೆ ಇಡೀ ಕಲ್ಯಾಣಿ ಸಮುಚ್ಚಯಕ್ಕೆ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ಮಹೂರ್ತ ಪಠಣೆಯ ನಂತರ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪ ಮಂಟಪದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವೈಭವದ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.ತೆಪ್ಪೋತ್ಸವಕ್ಕೂ ಮುನ್ನ ಮತ್ತು ನಂತರ ವಿಶೇಷ ನಾದಸ್ವರವಾದನದೊಂದಿಗೆ ಚೆಲುವನಾರಾಯಣಸ್ವಾಮಿಗೆ ವೈಭವದ ಉತ್ಸವ ನೆರವೇರಿಸಲಾಯಿತು. ಉತ್ಸವದ ಆರಂಭದ ವೇಳೆ ಸ್ಕೈಶಾಟ್ಸ್ ಸಿಡಿಸಿದಾಗ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಆಸಕ್ತಿ ಪರಿಣಾಮ ವಿಶೇಷವಾಗಿ ನಡೆದ ವೈರಮುಡಿ ತೆಪ್ಪೋತ್ಸವದ ಮೂರು ಸುತ್ತಿನ ವೇಳೆ ಮ್ಯಾಂಡಲಿನ್ ಮಾಂತ್ರಿಕ ಯು.ಶ್ರೀನಿವಾಸ್ ಶಿಷ್ಯ ವೆಂಕಟೇಶ್ ರಿಂದ ಮ್ಯಾಂಡಲಿನ್ ವಾದನ, ವಿದುಶಿ ಆಂಡಾಳ್ ಶ್ರೀರಾಮ್ ಮತ್ತು ಅಮುದಾನವನೀತ್ ತಂಡದ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ , ವಿದ್ವಾನ್ ಶ್ರೀಧರ ತಂಡದ ನಾದಸ್ವರ ವಾದನ ವಿಶೇಷ ಭಕ್ತಿಸಿಂಚನದ ತೆಪ್ಪೋತ್ಸವದ ವೈಭವದ ಕ್ಷಣಗಳಿಗೆ ತಮ್ಮದೇ ನಾದ ಮಾಧುರ್ಯ ತುಂಬಿತು.ತೆಪ್ಪೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ನಂದೀಶ್, ದೇವಾಲಯದ ಇಒ ಶೀಲಾ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಹೋದರ ರಾಘವ ಪ್ರಕಾಶ್ ಸೇರಿದಂತೆ ಮಲಗು ಗಣ್ಯರು ಭಾಗವಹಿಸಿದ್ದರು.
ಇಂದು ತೀರ್ಥಸ್ನಾನ ಅವಭೃತ ಪಟ್ಟಾಭಿಷೇಕ:ಚೆಲುವನಾರಾಯಣಸ್ವಾಮಿಯ ಅನುಗ್ರಹ ಮತ್ತು ದರ್ಶನಕ್ಕೆ ಪ್ರಶಸ್ತ ದಿನವಾದ ಶನಿವಾರ ವೈರಮುಡಿ ಜಾತ್ರಾಮಹೋತ್ಸವದ 9ನೇ ತಿರುನಾಳ್ ಅಂಗವಾಗಿ ಕಲ್ಯಾಣಿಯಲ್ಲಿ 11 ಗಂಟೆ ನಂತರ ತೀರ್ಥಸ್ನಾನ ನಡೆಯಲಿದೆ. ನಂತರ ಸಂಜೆ 5 ಗಂಟೆಗೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ನಡೆಯಲಿದೆ ಇದರೊಂದಿಗೆ ವಜ್ರಖಚಿತ ರಾಜಮುಡಿ ಕಿರೀಟದ ಅಲಂಕಾರ ಸಮಾಪ್ತಿಯಾಗಲಿದೆ. ರಾತ್ರಿ ಸಮರಭೂಪಾಲವಾಹನ, ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಲ್ಕೂ ಸ್ಥಾನಾಚಾರ್ಯರಿಗೆ ಮಾಲೆಮರ್ಯಾದೆ ನೆರವೇರಲಿದೆ.