ಗದಗ: ಜ. 16ರಿಂದ ತಾಲೂಕಿನ ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ತ್ರಿಕಾಲ ಜ್ಞಾನಿ, ಮೌನತಪಸ್ವಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ, ಧಾರ್ಮಿಕ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಸಲು ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರ ಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಭಕ್ತರು, ಶರಣರ ಬಳಗದ ಹಿರಿಯರು ನಿರ್ಣಯಿಸಿದರು.
ಸಭೆಯಲ್ಲಿ ಜ. 16ರಿಂದ 26ರ ವರೆಗೆ ಜಾತ್ರಾಮಹೋತ್ಸವದ ಅಂಗವಾಗಿ ನಡೆಯುವ ಪ್ರವಚನ ಹಾಗೂ ಜ. 25ರಂದು ಬೆಳಗ್ಗೆ ನಡೆಯುವ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಸಂಜೆ ಜರುಗುವ ಮಹಾರಥೋತ್ಸವವನ್ನು ಯಶಸ್ವಿಗೊಳಿಸುವುದಲ್ಲದೆ, ಜ. 16ರಿಂದ 26ರ ವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮದ ಸುತ್ತಮುತ್ತಲಿನ ಭಕ್ತರು ದಾಸೋಹ ಕಾರ್ಯ, ಬುಂದೆ ತಯಾರಿಸಲು, ಅಡುಗೆ ತಯಾರಿಸಲು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲು ಹಾಗೂ ಸ್ವಚ್ಛತಾ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ತೀರ್ಮಾನಿಸಿ, ಶ್ರೀಮಠದ ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸುವ ಮೂಲಕ ಗುರುವಿನ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.
ಈ ಸಭೆಯಲ್ಲಿ ಬಳಗಾನೂರ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಶರಣ ಬಳಗದವರು ಉಪಸ್ಥಿತರಿದ್ದರು.