ಕನ್ನಡಪ್ರಭ ವಾರ್ತೆ ನಾಗಮಂಗಲ
ಶುಕ್ರವಾರ ಸೂರ್ಯೋದಯಕ್ಕೂ ಮುನ್ನ ನಸುಕಿನಲ್ಲಿ ಶ್ರೀಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳು ಕ್ಷೇತ್ರದ ರಥದಬೀದಿಯಲ್ಲಿ ಬಗೆ ಬಗೆಯ ಹೂವು ಮತ್ತು ವಿದ್ಯುತ್‌ದೀಪಗಳಿಂದ ಸರ್ವಾಲಂಕೃತವಾಗಿದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶ್ರೀ ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ಗುರುವಾರ ಇಡೀ ರಾತ್ರಿ ಶ್ರೀಕ್ಷೇತ್ರದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದವು. ಶ್ರೀಕ್ಷೇತ್ರದ ಅಧಿದೇವತೆ ಗಂಗಾಧರೇಶ್ವರಸ್ವಾಮಿಯನ್ನು ಅಲಂಕೃತಗೊಂಡಿದ್ದ ರಥದಲ್ಲಿ ಕೂರಿಸಲಾಗಿತ್ತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸಾಗರೋಪಾದಿಯಲ್ಲಿ ಹರಿದುಬಂದಿದ್ದ ಭಕ್ತರು ರಥವನ್ನು ಎಳೆಯುವ ಜೊತೆಗೆ ಹಣ್ಣು, ಜವನ ಎಸೆದು ತಮ್ಮ ಭಕ್ತಿ ಭಾವವನ್ನು ಮೆರೆದರು.ರಥೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ ಅಡ್ಡಪಾಲಕಿ ಉತ್ಸವವೂ ಕೂಡ ಪ್ರಾರಂಭವಾಯಿತು. ಒಂದೆಡೆ ಭಕ್ತರು ರಥವನ್ನು ಎಳೆದು ಧನ್ಯರಾಗುತ್ತಿದ್ದರೆ ಮತ್ತೊಂದೆಡೆ ಸರ್ವಾಲಂಕಾರ ಭೂಷಿತರಾಗಿ ಚಿನ್ನದ ಕಿರೀಟ ಧರಿಸಿ ಪಾಲಕಿಯಲ್ಲಿ ಕುಳಿತು ದರ್ಶನ ನೀಡುತ್ತಿದ್ದ ಶ್ರೀಗಳನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು. ಶ್ರೀಗಳು ಹಸನ್ಮುಖಿಯಾಗಿ ಎಲ್ಲರಿಗೂ ದರ್ಶನಾಶೀರ್ವಾದ ನೀಡಿದರು.