ಮಾರಿಕೊಪ್ಪದ ಶ್ರೀ ಹಳದಮ್ಮದೇವಿ ದೊಡ್ಡ ಬನ್ನಿ ಮಹೋತ್ಸವ ಸಂಪನ್ನ

KannadaprabhaNewsNetwork |  
Published : Oct 19, 2024, 12:27 AM IST
ಹೊನ್ನಾಳಿ ಫೋಟೋ 18ಎಚ್.ಎಲ್.ಐ4.ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಜಯಘೋಷದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.  | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ, ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖ ಜಯಘೋಷದ ಮಧ್ಯೆ ಅಂಬು ಹೊಡೆಯುವುದರ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ, ಹೊನ್ನಾಳಿ

ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ, ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖ ಜಯಘೋಷದ ಮಧ್ಯೆ ಅಂಬು ಹೊಡೆಯುವುದರ ಮೂಲಕ ವಿಜೃಂಭಣೆಯಿಂದ ನೆರವೇರಿತು.

ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ. ಹೊನ್ನಾಳಿ ಪಟ್ಟಣ, ಮಾರಿಕೊಪ್ಪ, ಮಾದೇನಹಳ್ಳಿ, ಅರಬಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಮುತ್ತೈದೆಯರು, ಜೋಗಮ್ಮನವರು ಶುಕ್ರವಾರ ಮಧ್ಯಾಹ್ನದಿಂದಲೇ ಉಪವಾಸ ವ್ರತ ಆಚರಿಸಿ, ಬನ್ನಿ ಮುಡಿಯುವವರೆಗೂ ದೀಪಗಳನ್ನು ಹಿಡಿದು ಬೆಳಗಿದರು.

ಎತ್ತುಗಳನ್ನು ಅಲಂಕರಿಸಿ ಭಕ್ತರು ಗಾಡಿಗಳಲ್ಲಿ ಆಗಮಿಸುವುದನ್ನು ನೋಡುವುದೇ ವಿಶೇಷ ಸಂಭ್ರಮ. ಹೊನ್ನಾಳಿ, ನ್ಯಾಮತಿ ತಾಲೂಕುಗಳು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿದರು. ಎತ್ತಿನ ಗಾಡಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳು, ಕಾರು ಇನ್ನಿತರೆ ವಾಹನಗಳಲ್ಲಿ ಭಕ್ತರು ಶುಕ್ರವಾರ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದರು. ಬಹುತೇಕರು ಗುರುವಾರ ರಾತ್ರಿಯೇ ದೇವಸ್ಥಾನಕ್ಕೆ ಆಗಮಿಸಿ, ಪ್ರಾಂಗಣದಲ್ಲಿಯೇ ಉಳಿದುಕೊಂಡಿದ್ದರು.

ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಹಳದಮ್ಮ ದೇವಿ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಪ್ರಧಾನ ಅರ್ಚಕ ಎನ್.ಜಿ. ಮಲ್ಲಿಕಾರ್ಜನಪ್ಪ ಉಪವಾಸ ವ್ರತದೊಂದಿಗೆ ಶಮೀ ವೃಕ್ಷದ ಮುಂಭಾಗದಲ್ಲಿ ಮೂರು ಬಾಣ (ಅಂಬು) ಹೊಡೆದರು. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ ಹಾಗೂ ರೈತರು-ನಾಡಿನ ಭವಿಷ್ಯವನ್ನು ಲೆಕ್ಕ ಹಾಕುವ ಪದ್ಧತಿ ಭಕ್ತರಲ್ಲಿ ಕಂಡುಬಂದಿತು. ಅಂಬು ಮುಗಿದ ನಂತರ ಭಕ್ತರು ಬನ್ನಿಪತ್ರೆ ವಿನಿಮಯ ಮಾಡಿಕೊಂಡರು. ಒಣ ಕೊಬ್ಬರಿ ಸುಡುವ ಮೂಲಕ ಭಕ್ತರು ಹರಕೆ ತೀರಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ರೂಪ ಚನ್ನೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಚಿನ್ನಪ್ಪ, ಹಳದಪ್ಪ ಸದಸ್ಯ ಮೈಲಪ್ಪ, ಮುಖಂಡರಾದ ಪ್ರಭುಗೌಡ, ಟಿ.ತಿಮ್ಮಪ್ಪ, ಕಂದಾಯ ಇಲಾಖೆ ರಾಜಸ್ವ ನೀರಿಕ್ಷಕರು, ಗ್ರಾಮ ಲೆಕ್ಕಿಗರು ಕಂದಾಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.

- - - -18ಎಚ್.ಎಲ್.ಐ4.:

ಮಾರಿಕೊಪ್ಪ ಗ್ರಾಮದಲ್ಲಿ ಶ್ರೀ ಹಳದಮ್ಮ ದೇವಿ ದೊಡ್ಡ ಬನ್ನಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?