ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಯಾದಪುರದ ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿ ಮಹಾ ರಥೋತ್ಸವವು ಭಾನುವಾರ ಮುಂಜಾನೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ಮುಂಜಾನೆ ಶ್ರೀಗಳ ದೇವಾಲಯದಲ್ಲಿ ಸುಮಂಗಲಿಯರಿಂದ ಬಾಯಿಬೀಗ ಧಾರಣೆಯ ಹರಕೆಯೊಂದಿಗೆ ಚಂದ್ರಮಂಡಲೋತ್ಸವ ಮತ್ತು ಅಗ್ನಿಕುಂಡ ಸೇವೆ ಹಾಗೂ ಕೆಂಚಮ್ಮ ದೇವಿ ದೇವಸ್ಥಾನದಲ್ಲಿ ಗುಗ್ಗಳಸೇವೆ ಧಾರ್ಮಿಕ ಕಾರ್ಯಗಳು ನೆರವೇರಿದ ನಂತರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಉತ್ಸವಮೂರ್ತಿಗೆ ಮಹಾಮಂಗಳಾರತಿ, ನಡೆಮುಡಿ ಸೇವೆ ಮತ್ತು ತೇರು ಮಂಟಪದ ಸೇವಾ ಕಾರ್ಯಕ್ರಮಗಳು ಸಂಪ್ರದಾಯದಂತೆ ಪೂರೈಸಿದ ಮೇಲೆ ಶ್ರೀ ಸ್ವಾಮಿಯವರನ್ನು ಬಣ್ಣಬಣ್ಣದ ಬಟ್ಟೆಗಳಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದ ನಂತರ ಮಹಾರಥೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರು ಮಹಾರಥದ ಕಳಶಕ್ಕೆ ದವನ ಮತ್ತು ಬಾಳೆಹಣ್ಣುಗಳನ್ನು ಎಸೆದು ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು.
ಶ್ರೀ ಜೇನುಕಲ್ ಸಿದ್ಧೇಶ್ವರ ಕ್ಷೇತ್ರಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ.ವಿ.ಬಸವರಾಜು ಕಾರ್ಯದರ್ಶಿ ವೀರಭದ್ರಪ್ಪ, ಖಜಾಂಚಿ ಎಸ್.ಎನ್.ರಾಮಣ್ಣ, ನಿರ್ದೇಶಕರಾದ ಜಿ.ನಾಗರಾಜ್, ವೈ.ಎನ್.ಸಿದ್ದಪ್ಪ, ವಹಿವಾಟುದಾರರಾದ ಚಂದ್ರಪ್ಪ ಹಾಗೂ ಗ್ರಾಮದ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ರಾಜ್ಯದ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದು, ಇಲ್ಲಿನ ಕ್ಷೇತ್ರಾಭಿವೃದ್ಧಿ ಮಂಡಲಿ ವತಿಯಿಂದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಎರಡು ದಿನವು ಹಗಲು-ರಾತ್ರಿ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.