ಕನ್ನಡಪ್ರಭ ವಾರ್ತೆ ಮಧುಗಿರಿ
ಸಮಾಜದಲ್ಲಿ ಹಲವು ಜಾತಿ, ಧರ್ಮದವರಿದ್ದು, ಯಾವುದೇ ತಾರತಮ್ಯವಿಲ್ಲದೆ ಅವರ ಆರೋಗ್ಯ ರಕ್ಷಣೆ ಮತ್ತು ದೇಶದ ಏಳಿಗೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ ಎಂದು ಮಧುಗಿರಿ ತಾಲೂಕು ತೊಣಚಗೊಂಡನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಸಾಮ್ರಾಜ್ಯ ಲಕ್ಷ್ಮೀ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಕೃಪಾನಂದ ಸ್ವಾಮೀಜಿ ತಿಳಿಸಿದರು.ತಾಲೂಕಿನ ತೊಣಚಗೊಂಡನಹಳ್ಳಿ ಗ್ರಾಮದ ಸಾಮ್ರಾಜ್ಯ ಲಕ್ಷ್ಮೀ ದೇವಸ್ಥಾನ, ಸಾಮ್ರಾಜ್ಯ ಲಕ್ಷ್ಮೀ ಫೌಂಡೇಶನ್ , ಶ್ರೀದೇವಿ ವೈದ್ಯಕೀಯ ಕಾಲೇಜು, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹಾಗೂ ಪುರಸಭೆ ಮಧುಗಿರಿ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೆ.ಆರ್. ಬಡಾವಣೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಿನನಿತ್ಯದ ಆಹಾರ ಪದ್ಧತಿ, ಬೇಜವಾಬ್ದಾರಿ ಜೀವನ ವಿಧಾನದಿಂದ ಮುಂದೆ ಜನರಿಗೆ ಹೆಚ್ಚು ರೋಗಗಳು ಕಾಡುವ ಭೀತಿಯಿದೆ. ಆದ್ದರಿಂದ ಸದಾ ಎಚ್ಚರದಿಂದ ಇದ್ದು ಆರೋಗ್ಯ ತಪಾಸಣೆಗೆ ಒಳಗಾಗಬೇಕು, ಮುಂಜಾಗ್ರತಾ ಕ್ರಮ ವಹಿಸಿ ಈ ಭಯಾನಕ ರೋಗಗಳು ಹರಡದಂತೆ ಔಷಧೋಪಚಾರಗಳನ್ನು ಮೊದಲೇ ಪಡೆದು ಆರೋಗ್ಯವಂತರಾಗಿ ಜೀವಿಸಬೇಕೆಂದು ತಿಳಿಸಿದರು.ಮಧುಗಿರಿ ರಾಘವೇಂದ್ರ ಆಸ್ಪತ್ರೆಯ ಮುಖ್ಯಸ್ಥ , ಖ್ಯಾತ ವೈದ್ಯ ಡಾ.ಜಿ.ಕೆ.ಜಯರಾಮ್ ಮಾತನಾಡಿ,
ಧರ್ಮದ ಹೆಸರಿನಲ್ಲಿ ದೇಗುಲ ಕಟ್ಟಿಸಿ ಅದರ ಸಾರ್ಥಕತೆ ಪಡೆದು, ಪ್ರಸ್ತುತ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಏರ್ಪಡಿಸಿ, ಜನ ಕಲ್ಯಾಣದ ಕಾರ್ಯಕ್ಕೆ ಮುಂದಾಗಿರುವ ಕೃಪಾನಂದ ಸ್ವಾಮೀಜಿ ಅವರ ಜನಮುಖಿ ಕಾರ್ಯ ಇತರರಿಗೆ ಮಾದರಿ ಎಂದು ಬಣ್ಣಿಸಿದರು.ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಮೂರ್ತಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ ಮತ್ತು ದುರ್ಬಲರ ಆರೋಗ್ಯ ಕಾಪಾಡಲು ಮುಂದಾಗಿರುವ ಕೃಪಾನಂದ ಸ್ವಾಮೀಜಿ ಅವರ ಕಾರ್ಯ ಮೆಚ್ಚುವಂಥದ್ದು, ಇವರ ಈ ಸಮಾಜಮುಖಿಯ ಕಾರ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಡಾ. ಎಂ.ಆರ್.ರಂಗನಾಥ್ ಸೇರಿದಂತೆ ಹಲವರು ಇದ್ದರು.