ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಗುಡ್ಡಬೆಟ್ಟಗಳ ತಪ್ಪಲಲ್ಲಿರುವ ಹಾಗೂ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ೫ ಗಂಟೆಗೆ ಶ್ರೀಕುಮಾರಸ್ವಾಮಿಗೆ ಮಹಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ ೯ ಗಂಟೆಯಿಂದ ಶ್ರೀಕುಮಾರಸ್ವಾಮಿಗೆ ಪೂರ್ಣಾಲಂಕಾರ ಸೇವೆ ಹಾಗೂ ಯೋಗ ದರ್ಶನ ಜರುಗಿತು. ಸಂಜೆ ೬ ಗಂಟೆಗೆ ಘೋರ್ಪಡೆ ರಾಜವಂಶಸ್ಥರು ಧ್ವಜಾರೋಹಣ ಪೂಜೆ ನೆರವೇರಿಸಿದರು.
ರಾತ್ರಿ ೮.೩೦ಕ್ಕೆ ಶ್ರೀಸ್ವಾಮಿಗೆ ಪಾಲಿಕಿ ಸೇವೆ ಮತ್ತು ಪಿಕಲೋತ್ಸವ, ೯.೧೫ಕ್ಕೆ ತೊಟ್ಟಿಲು ಸೇವೆ ನೆರವೇರಿಸಲಾಯಿತು. ಧ್ವಜಾರೋಹಣದ ನಂತರ ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವಲ್ಲದೆ, ಜಾತ್ರಾ ಮಹೋತ್ಸವಕ್ಕೆ ಕಳೆ ಕಟ್ಟಿದವು. ಜಾತ್ರೆಯ ಹಿನ್ನೆಲೆ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಗ್ಗೆ ೯ಗಂಟೆಯಿಂದ ಪ್ರತಿಪದಾದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ದೇವಸ್ಥಾನದಲ್ಲಿ ಮೊಳಗಿದ ಜೈಜೈಕಾರ:
ಶ್ರೀಕುಮಾರಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಂದ ಜಯಘೋಷ ಮೊಳಗಿತು. ಸಂಡೂರಿನ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ೧೧ ಕಿಮೀ ದೂರದ ಬೆಟ್ಟಕ್ಕೆ ತೆರಳಿ, ಶ್ರೀಕುಮಾರಸ್ವಾಮಿಯ ದರ್ಶನ ಪಡೆದರು.
ದೇವಸ್ಥಾನ ಆಡಳಿತ ಮಂಡಳಿ, ವೆಸ್ಕೊ, ಬಿಕೆಜಿ ಸಂಸ್ಥೆಗಳವರು ಹಾಗೂ ಕೆಲವು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಉಪಹಾರ ಹಾಗೂ ಪುಷ್ಕಳ ಭೋಜನದ ವ್ಯವಸ್ಥೆ ಕಲ್ಪಿಸಿದ್ದರು.
ಬಾಗಲಕೋಟೆ ಜಿಲ್ಲೆಯ ಬಂಡಿಗಣಿಯ ಚಕ್ರವರ್ತಿದಾನೇಶ್ವರ ಅಭಿವೃದ್ಧಿ ಸೇವಾ ಸಂಘ ಸವದಿಯ ಸುಮಾರು ೪೦೦ ಭಕ್ತರು ದೇವಸ್ಥಾನದ ಬಳಿಯ ವಿಶಾಲವಾದ ಜಾಗದಲ್ಲಿ ಜಾತ್ರೆಗೆ ಬಂದ ಭಕ್ತರಿಗೆ ಭಾನುವಾರದಿಂದ ಬುಧವಾರದವರೆಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಪುಷ್ಕಳವಾದ ಭೋಜನ ವ್ಯವಸ್ಥೆ ಕೈಗೊಂಡಿರುವುದು ಜನರ ಗಮನ ಸೆಳೆಯಿತು. ಶ್ರೀಮಠದ ಭಕ್ತರ ಸೇವಾ ಮನೋಭಾವಕ್ಕೆ ಜಾತ್ರೆಗೆ ಬಂದಿದ್ದ ಭಕ್ತರು ಮೆಚ್ಚುಗೆ ಹಾಗೂ ಅಭಿಮಾನ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಸಂಡೂರು ಬಸ್ ಘಟಕದಿಂದ ಸುಮಾರು೩೦ ಬಸ್ ಬಿಡಲಾಗಿತ್ತು. ಒಂದು ಬಸ್‌ನಲ್ಲಿ ಸೀಟ್‌ಗಳಿರುವಷ್ಟೇ ಜನರನ್ನು ಹತ್ತಿಸುತ್ತಿದ್ದದರಿಂದ ನೂಕು ನುಗ್ಗಲು ಇರಲಿಲ್ಲ. ಜನತೆ ಸುಗಮವಾಗಿ ಜಾತ್ರೆಗೆ ಹೋಗಿ ಬರುವಂತಾಯಿತು.
ಸಂಡೂರಿನ ಬಸ್ ನಿಲ್ದಾಣ ಹಾಗೂ ಶ್ರೀಕುಮಾರಸ್ವಾಮಿ ದೇವಸ್ಥಾನದ ಬಳಿಯಲ್ಲಿ ಆರೋಗ್ಯಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.
ಭಕ್ತರು ಸಾಲಾಗಿ ಸಾಗಿ ದೇವರದರ್ಶನ ಪಡೆಯಲು ಅನುಕೂಲವಾಗುವಂತೆ ಪೊಲೀಸ್ ಹಾಗೂ ಸ್ಮಯೋರ್ ಕಂಪನಿ ಸಿಬ್ಬಂದಿಗಳಿಂದ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.