ಕನ್ನಡಪ್ರಭ ವಾರ್ತೆ ಬೆಂಗಳೂರು
ಶ್ರೀಲಂಕಾದ ನ್ಯಾಯಮೂರ್ತಿ ನವಾಜ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ, ಗೂಗಲ್ ಇಂಡಿಯಾ ಹಾಗೂ ಗೂಗಲ್ ಇಂಕ್‌ಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾ ಈನ್ಯೂಸ್‌ಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿಕೊಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ಮಾ.16ಕ್ಕೆ ವಿಚಾರಣೆ ಮುಂದೂಡಿದೆ.
ಶ್ರೀಲಂಕಾದ ಕೋರ್ಟ್ ಆಫ್ ಅಪೀಲ್‌ನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾಈನ್ಯೂಸ್ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿರುವುದು ಗೂಗಲ್‌ನಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಆರೋಪಿಸಲಾದ ಕೃತ್ಯಗಳಲ್ಲಿ ನಾವು ಭಾಗಿಯಾಗಿಲ್ಲ. ಆ ಸುದ್ದಿಗಳಿಂದ ತಮಗೆ ಮಾನಹಾನಿಯಾಗಿದೆ. ಆನ್‌ಲೈನ್‌ನಲ್ಲಿರುವ ಮಾನಹಾನಿ ವಿಚಾರಗಳನ್ನು ತೆಗೆದು ಹಾಕುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು 2023ರಲ್ಲಿ ಗೂಗಲ್‌ಗೆ ಲೀಗಲ್ ನೋಟಿಸ್ ಕಳುಹಿಸಲಾಗಿತ್ತು. ಅಲ್ಲಿಂದ ಯಾವುದೇ ಪ್ರತಿಕ್ರಿಯೆಬಾರದೇ ಇರುವುದರಿಂದ ಮತ್ತು ಗೂಗಲ್‌ನ ಭಾರತದ ಪ್ರಧಾನ ಕಚೇರಿಯು ಬೆಂಗಳೂರಿನಲ್ಲಿ ಇರುವುದರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ ಎಂದ ಅರ್ಜಿಯಲ್ಲಿ ನ್ಯಾ.ನವಾಜ್ ತಿಳಿಸಿದ್ದಾರೆ.ಶ್ರೀಲಂಕಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿರುವುದರಿಂದ ತಮ್ಮ ವಿರುದ್ಧದ ಮಾನಹಾನಿ ಸುದ್ದಿಯ ವಿಚಾರವಾಗಿ ಅಲ್ಲಿನ ನ್ಯಾಯಾಲಯದಲ್ಲಿ ದಾವೆ ಹೂಡುವುದು ನೈತಿಕವಾಗಿ ನಿಷೇಧಿಸಲ್ಪಟ್ಟಿದೆ. ಭಾರತ ಪ್ರಾಮಾಣಿಕ ನ್ಯಾಯಾಂಗ ಹೊಂದಿದೆ.ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯ ಒದಗಿಸುವ ಈ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ತನಗೆ ಸಂಪೂರ್ಣ ವಿಶ್ವಾಸವಿದೆ. ಭಾರತದ ಸಂವಿಧಾನದ 21ನೇ ವಿಧಿಯಡಿ ಕಲ್ಪಿಸಲಾಗಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಭಾರತೀಯರಿಗಲ್ಲದೇ ವಿದೇಶಿಯರಿಗೂ ವಿಸ್ತರಿಸಲಾಗಿದೆ. ಇದರಿಂದ ಭಾರತದ ನ್ಯಾಯಾಲಯದ ಕದ ತಟ್ಟಲಾಗಿದೆ ಎಂದು ಅರ್ಜಿಯಲ್ಲಿ ನ್ಯಾ.ನವಾಜ್ ತಿಳಿಸಿದ್ದಾರೆ.